ಬೆಂಗಳೂರು: ಕೊರೊನಾ ಲಾಕ್ ಡೌನ್ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಇಂದು ಅತ್ಯಂತ ದುಃಖದಿಂದ ಮಾತನಾಡುತ್ತಿದ್ದೇನೆ. ಕೆಪಿಸಿಸಿ ಅಧ್ಯಕ್ಷನಾಗಿ ಮಾತಾಡುತ್ತಿಲ್ಲ, ಸಾಮಾನ್ಯನಾಗಿ ಮಾತನಾಡುತ್ತಿದ್ದೇನೆ. ಸರ್ಕಾರ ತೆಗೆದುಕೊಂಡ ತೀರ್ಮಾನಗಳನ್ನು ನಾವು ಒಪ್ಪಿಕೊಂಡಿದ್ದೇವೆ, ಬೆಂಬಲ ನೀಡಿದ್ದೇವೆ. ಜೀವ ಇದ್ದರೆ ಮಾತ್ರ ವ್ಯವಹಾರ, ರಾಜಕೀಯ. ಇದು ಯಾವುದೇ ಜಾತಿ ಧರ್ಮಕ್ಕೆ ಬಂದಿರುವ ಕಾಯಿಲೆ ಅಲ್ಲ. ಆದರೆ, ಪ್ರಧಾನಿ ಮೋದಿ ಇದೂವರೆಗೂ ಅಸಂಘಟಿತ ವಲಯದ ಬಗ್ಗೆ ಒಂದೇ ಒಂದು ಮಾತನಾಡಲಿಲ್ಲ. ರಾಜ್ಯದ ಅನೇಕ ಮಂತ್ರಿಗಳು ಮಾತನಾಡಿದ್ದು ನೋಡಿಲ್ಲ, ಕಾರ್ಮಿಕ ಸಚಿವರು ಎಲ್ಲಿ ಇದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದ್ರು.
“ಪ್ರತಿ ಕಾರ್ಮಿಕನಿಗೂ ಪರಿಹಾರ ನೀಡಬೇಕು”
ಸುದ್ದಿಗೋಷ್ಠಿಯಲ್ಲಿ ರಾಜ್ಯದ ಪ್ರತಿ ಕಾರ್ಮಿಕನಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಡಿಕೆಶಿ, ನರೇಗಾ ಯೋಜನೆಯಡಿ 10 ಸಾವಿರ ಕೋಟಿ ಇದೆ. ಅದನ್ನು ನರೇಗಾ ಕೂಲಿ ಕಾರ್ಮಿಕರಿಗೆ ತಲುಪಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂಪಾಯಿ ಕೊಡಬೇಕು ಎಂದರು.
ಇದಲ್ಲದೆ ಲಕ್ ಡೌನ್ ಹಿನ್ನೆಲೆ ತರಕಾರಿ, ಹೂವು, ಹಣ್ಣು ನಾಶವಾಗುತ್ತಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೂ ಅಧಿಕಾರಿಗಳು ಸರ್ವೆ ಮಾಡಿಲ್ಲ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕೃಷಿ ಸಚಿವರು ಹೇಳುತ್ತಾರೆ. ಯಾರಿಗೆ, ಯಾವ ನಂಬರ್ ಗೆ ಕರೆ ಮಾಡಿ ಸಮಸ್ಯೆಗಳನ್ನು ಹೇಳಬೇಕು ಎಂದು ಪ್ರಶ್ನಿಸಿದರು. ಇನ್ನು ಅತಂತ್ರ ಸ್ಥಿತಿಯಲ್ಲಿ ರೈತ ಬದುಕುತ್ತಿದ್ದಾನೆ. ಪ್ರತಿ ತಾಲೂಕಿನಲ್ಲಿ ನೂರು ಕೋಟಿ ವ್ಯಯ ಆಗುತ್ತಿದೆ. ಪಡಿತರ ವಿತರಣೆಯಲ್ಲಿ ಗೊಂದಲ ಬಗೆಹರಿಯೋದು ಯಾವಾಗ.. ಎಂದ ಡಿಕೆಶಿ, ಮಾವು ಬೆಳೆದವರು, ಅಡಿಕೆಗಾರರ ಕಥೆ ದೇವರೇ ಕಾಪಾಡಬೇಕು ಎಂದು ಬೇಸರ ಹೊರಹಾಕಿದ್ರು.








