ಬೆಳಗಾವಿ : ಮೋದಿ ಅವರಿಗೆ ಕರ್ನಾಟಕದ ಮೇಲೆ ಪ್ರೀತಿ ಕಡಿಮೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೇಂದ್ರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕಳೆದ ವರ್ಷ ಕರ್ನಾಟಕ ಪ್ರವಾಹಕ್ಕೆ ತತ್ತರಿಸಿದರೂ ರಾಜ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಬರಲಿಲ್ಲ. ಸ್ವತಃ ಸಿಎಂ ಯಡಿಯೂರಪ್ಪನವರೇ ಪರಿಹಾರಕ್ಕೆ ಒತ್ತಾಯಿಸಿದ್ರೂ ಪ್ರಧಾನಿಗಳು ಕ್ಯಾರೆ ಎನ್ನಲಿಲ್ಲ. ಸಾಕಷ್ಟು ಸಂಸದರು ಕರ್ನಾಟಕದಿಂದ ಆಯ್ಕೆ ಆದ್ರೂ ಮೋದಿ ಅವರಿಗೆ ಕರ್ನಾಟಕದ ಮೇಲೆ ಪ್ರೀತಿ ಕಡಿಮೆ. ಪ್ರವಾಹಕ್ಕೆ ಕಡಿಮೆ ತತ್ತರಿಸಿದ ರಾಜ್ಯಕ್ಕೆ ಹೆಚ್ಚು ಪರಿಹಾರ ನೀಡಲಾಗ್ತಿದೆ. ಆದ್ರೆ ಮೋದಿ ಸರ್ಕಾರ ಕರ್ನಾಟಕವನ್ನು ಪದೇ ಪದೇ ನಿರ್ಲಕ್ಷಿಸುತ್ತಿದೆ. ನಮ್ಮ ಸಂಸದರು ಪರಿಹಾರ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಜಿಲ್ಲೆಯ ಪ್ರವಾಹದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಜಿಲ್ಲೆಗೆ ನಾಲ್ವರು ಮಂತ್ರಿಗಳಿದ್ದರೂ ಪ್ರಯೋಜನವಾಗ್ತಿಲ್ಲ. ನಾಲ್ವರು ಮಂತ್ರಿ ಆಗಿದಕ್ಕೆ ಜಿಲ್ಲೆಗೆ ಸಿಂಹಪಾಲು ಸಿಕ್ತು ಎಂದು ಹೇಳಲಾಗಿತ್ತು. ಆದ್ರೆ ನಾಲ್ವರು ಜಿಲ್ಲೆಯ ಸಮಸ್ಯೆ ಪರಿಹರಿಸಲು ಶ್ರಮಿಸುತ್ತಿಲ್ಲ. ಕೋವಿಡ್, ಪ್ರವಾಹ ಭೀತಿ ಸಂಬಂಧ ಜಂಟಿ ಆಗಿ ಸಭೆ ನಡೆಸಿದ್ರೆ ಮಾತ್ರ ಅಧಿಕಾರಿಗಳ ಮೇಲೆ ಒತ್ತಡ ತರಬಹುದು. ಆದ್ರೆ ಜಿಲ್ಲೆಯ ಸಚಿವರ ಮಧ್ಯೆ ಸಮನ್ವಯತೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.








