ದೇಶ ಇಂದು ಗುಲಾಮಿತನದ ಮಾನಸಿಕತೆಯಿಂದ ಹೊರಬಂದಿದೆ – ಪ್ರಧಾನಿ ಮೋದಿ…
ಅಸ್ಸಾಂನಲ್ಲಿ ಐತಿಹಾಸಿಕ ಅಹೋಂ ಸಾಮ್ರಾಜ್ಯದ ಪ್ರಧಾನ ಸೇನಾಧಿಪತಿಯಾಗಿದ್ದ ಲಚಿತ್ ಬರ್ಫುಕನ್ ಅವರ 400ನೇ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು. ಈ ವೇಳೆ ಅಹೋಂ ಸಾಮ್ರಾಜ್ಯದ ಸಾಂಪ್ರದಾಯಿಕ ಶಸ್ತ್ರಾಸ್ತ್ರ ನೀಡಿ ಪ್ರಧಾನಿ ಅವರನ್ನು ಗೌರವಿಸಲಾಯಿತು.
ಸಮಾರಂಭ ಉದ್ದೇಶಿಸಿ ಪ್ರಧಾನಿ, ದೇಶ ಸ್ವಾತಂತ್ರ್ಯ ಗಳಿಸಿದ ಅಮೃತ ಕಾಲದಲ್ಲಿ ಲಚಿತ್ ಬರ್ಫುಕನ್ ಅವರಂತಹ ವೀರ ಸೇನಾನಿಗಳ 400ನೇ ಜಯಂತಿ ಆಚರಿಸಲಾಗುತ್ತಿದೆ. ದೇಶ ಇಂದು ಗುಲಾಮಿತನದ ಮಾನಸಿಕತೆಯಿಂದ ಹೊರಬಂದು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಿದೆ. ಸಂಸ್ಕೃತಿಯ ಕುರಿತಾಗಿ ಮಾತ್ರವಲ್ಲ, ಮಹಾನ್ ಯೋಧರನ್ನು ಸಹ ಗೌರವದಿಂದ ಸ್ಮರಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಸಾವಿರಾರು ವರ್ಷಗಳ ಇತಿಹಾಸದಲ್ಲಿ ವಿದೇಶದಿಂದ ಬಂದ ಅನೇಕ ದಾಳಿಗಳನ್ನು ನಮ್ಮ ಪೂರ್ವಜರು ಹಿಮ್ಮೆಟ್ಟಿಸಿ, ಸಂಸ್ಕೃತಿ ಉಳಿಸಿದರು. ಸವಾಲು ಎದುರಾದ ಸಂದರ್ಭಗಳಲ್ಲಿ ಒಬ್ಬ ಯೋಧ ಉದಯಿಸಿ ಅದನ್ನು ತಡೆಯುತ್ತಿದ್ದ. ಲಚಿತ್ ಬರ್ಫುಕನ್ ಅಂತಹ ಮಹಾನ್ ಯೋಧರಲ್ಲಿ ಒಬ್ಬರಾಗಿದ್ದರು. ದೇಶದ ಐತಿಹಾಸಿಕ ಘಟನೆಗಳ ಮೂಲಕ ಜನರನ್ನು ಒಗ್ಗೂಡಿಸಲು ಸಾಧ್ಯ ಎಂದು ಹೇಳಿದರು. ಸಚಿವ ಸರ್ಬಾನಂದ ಸೋನೊವಾಲ್, ಪ್ರಧಾನಿ ಅವರು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ ಪರಿಣಾಮ, ಈ ಪ್ರದೇಶ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.
Narendra Modi: Today the country has come out of slavery mentality – PM Modi…