ಹಲವು ತರಹದ ರೋಗಗಳಿಗೆ ಪಾರಂಪರಿಕ ವಿಧಾನದಲ್ಲಿ ಮದ್ದು ನೀಡುತ್ತಿದ್ದ ನರಸೀಪುರದ ನಾಟೀ ವೈದ್ಯ ನಾರಾಯಣ ಮೂರ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪತ್ನಿ ಒಬ್ಬ ಮಗ ಹಾಗೂ ನಾಲ್ಕು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಮತ್ತು ಸ್ನೇಹಿತರನ್ನು ಆಗಲಿದ್ದಾರೆ. ನಾರಾಯಣ ಮೂರ್ತಿಯವರು ಹಲವಾರು ದಶಕಗಳಿಂದ ಕ್ಯಾನ್ಸರ್ ಹಾಗೂ ಮಾರಕ ಪೀಡಿತ ಕಾಯಿಲೆಗಳಿಗೆ ಔಷಧವನ್ನು ನೀಡುತ್ತಿದ್ದರು. ರಾಜ್ಯ ದೇಶ ವಿದೇಶಗಳಿಂದ ಇವರ ಬಳಿ ಔಷಧಿಗಾಗಿ ಸಾವಿರಾರು ಜನ ದಿನಂಪ್ರತಿ ಬರುತ್ತಿದ್ದರು.
ನರಸೀಪುರ ಅನ್ನುವ ಸಣ್ಣ ಹಳ್ಳಿ ಈಗೊಂದು ದಶಕದ ಹಿಂದೆಯೇ ಬಿಬಿಸಿಯ ಡಾಕ್ಯುಮೆಂಟರಿಯಲ್ಲಿ ಗುರುತಿಸಿಕೊಳ್ಳುವಂತಾಗಿದ್ದು ನಾರಾಯಣ ಮೂರ್ತಿಯವರಿಂದ. ವಿವಿಧ ತರಹದ ಕ್ಯಾನ್ಸರ್, ಮಧುಮೇಹ ಮುಂತಾದ ವ್ಯಾಧಿಗಳಿಗೆ ಬೇರನ್ನು ತೇದಿ ಲೇಹ ಕಷಾಯ ಕೊಟ್ಟು ನಾಟಿ ವೈದ್ಯ ಸೇವೆ ಮಾಡುತ್ತಿದ್ದವರು ನಾರಾಯಣ ಮೂರ್ತಿಗಳು. ನರಸೀಪುರ ಅಂದರೆ ನಾರಾಯಣ ಮೂರ್ತಿ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧರಾಗಿದ್ದವರು ಅವರು.
ಅವರಿಂದ ರೋಗ ವಾಸಿಯಾದವರ ಸಂಖ್ಯೆಯೂ ಬಹಳ ದೊಡ್ಡದಿದೆ. ಮುಖ್ಯವಾಗಿ ರೋಗಿಗಳಿಂದ ನಿರ್ದಿಷ್ಟ ಹಣ ವಸೂಲಿ ಮಾಡದೇ ಕೊಟ್ಟಷ್ಟು ತೆಗೆದುಕೊಂಡು ಮದ್ದು ಕೊಡುವ ನಾಟಿವೈದ್ಯರಾಗಿದ್ದರು ನಾರಾಯಣ ಮೂರ್ತಿಗಳು. ಶಿವಮೊಗ್ಗ ಜಿಲ್ಲೆ ಮತ್ತು ಸಾಗರ ತಾಲೂಕಿನ ಹೆಸರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದವರಲ್ಲಿ ಅವರೂ ಒಬ್ಬರು ಮತ್ತು ಪ್ರಮುಖರು.
ನಾರಾಯಣ ಮೂರ್ತಿಯವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಸಂಸದರಾದ ರಾಘವೇಂದ್ರ, ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ, ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಆನಂದಪುರದ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ, ಕನ್ನಡ ಯುವಕ ಸಂಘ ಪತ್ರಿಕಾ ಬಳಗದವರು ಸೇರಿದಂತೆ ಶಿವಮೊಗ್ಗದ ವಿವಿಧ ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿವೆ.