ಇತ್ತೀಚೆಗಿನ ಪ್ರಮುಖ ರಾಷ್ಟ್ರೀಯ – ಅಂತರಾಷ್ಟ್ರೀ ಸುದ್ದಿಗಳು
ಒಡಿಶಾದ ಬಾಲಾಸೋರ್ ಗೆ ಅಪ್ಪಳಿಸಲಿದೆ ‘ಯಸ್’ ಚಂಡಮಾರುತ
ಹಿಂದೂ ಮಹಾಸಾಗರದಲ್ಲಿ ಸೃಷ್ಟಿಯಾಗಿರುವ ‘ಯಸ್’ ಚಂಡಮಾರುತವು ಮೇ 26 ರ ಬುಧವಾರ ಮಧ್ಯಾಹ್ನದ ವೇಳೆಗೆ ಉತ್ತರ ಒಡಿಶಾದ ಬಾಲಾಸೋರ್ ನಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಎಚ್ಚರಿಸಿದೆ. ಚಂಡಮಾರುತವು ಒಡಿಶಾದ ಪಾರಾದೀಪ್ ಹಾಗೂ ಪಶ್ಚಿಮ ಬಂಗಾಳದ ಸಾಗರ ದ್ವೀಪವನ್ನು ದಾಟಿ ಹೋಗಲಿದೆ. ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲೂ ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎನ್ನಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕೋಲ್ಕತ್ತ ಬಂದರಿನಲ್ಲಿ ಎಲ್ಲಾ ಚಟುವಟಿಕೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಹಡಗುಗಳ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ. ಕಾರ್ಮಿಕರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇನ್ನೂ ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ಹೋಗಿದ್ದ ಎಲ್ಲಾ 265 ಬೋಟ್ಗಳು ಈಗಾಗಲೇ ತೀರಕ್ಕೆ ಮರಳಿವೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಒಡಿಶಾ ಸರ್ಕಾರವು ರಕ್ಷಣೆ ಹಾಗೂ ಪರಿಹಾರ ತಂಡಗಳನ್ನು ಬಾಲಾಸೋರ್ ಜಿಲ್ಲೆಗೆ ಕಳುಹಿಸಿದೆ. ತಗ್ಗು ಪ್ರದೇಶದಲ್ಲಿರುವವರು ಮತ್ತು ಚಂಡಮಾರುತದ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವ ಕೆಲಸ ಆರಂಭಿಸಲಾಗಿದೆ.
ಒಡಿಶಾದ ಬಾಲಾಸೋರ್ ಗೆ ಅಪ್ಪಳಿಸಲಿದೆ ‘ಯಸ್’ ಚಂಡಮಾರುತ
1 ಲಕ್ಷ ಸೋಂಕಿತರಿಗೆ ಪತಂಜಲಿಯ ಕೊರೊನಿಲ್ ಔಷಧಿ ಉಚಿತವಾಗಿ ಹಂಚಿದ ಹರಿಯಾಣ ಸರ್ಕಾರ
ನವದೆಹಲಿ: ಹರಿಯಾಣದಲ್ಲಿ 1 ಲಕ್ಷ ಪತಂಜಲಿಯ ಕೊರೊನಿಲ್ ಔಷಧಿ ಕಿಟ್ಗಳನ್ನು ಕೊರೊನಾ ಸೋಂಕಿತರಿಗೆ ಉಚಿತವಾಗಿ ಹಂಚಲಾಗಿದೆ. ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕೊರೊನಾ ಸೋಂಕಿತರು ಬೇಗ ಗುಣಮುಖರಾಗಲಿ ಎಂಬ ಉದ್ದೇಶದಿಂದ ಪತಂಜಲಿ ಆಯುರ್ವೇದದ ಕೊರೊನಿಲ್ ಔಷಧಿಯ 1 ಲಕ್ಷ ಕಿಟ್ಗಳನ್ನು ಕಿಟ್ಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಇದರ ಅರ್ಧದಷ್ಟು ಹಣವನ್ನು ಪತಂಜಲಿ ಭರಿಸಿದೆ, ಉಳಿದ ಅರ್ಧ ಹಣವನ್ನು ಸರ್ಕಾರದ ಕೋವಿಡ್ ರಿಲೀಫ್ ಫಂಡ್ನಿಂದ ಭರಿಸಲಾಗಿದೆ ಎಂದು ತಿಳಿಸಿದರು.
ಈ ಕಿಟ್ಗಳ ಅರ್ಧದಷ್ಟು ವೆಚ್ಚವನ್ನು ಪತಂಜಲಿ ಹಾಗೂ ಉಳಿದ ಅರ್ಧ ವೆಚ್ಚವನ್ನು ಸರ್ಕಾರದ ‘ಕೋವಿಡ್ ರಿಲೀಫ್ ಫಂಡ್’ ನಿಂದ ಭರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಕಿಟ್ನಲ್ಲಿ 3 ರೀತಿಯ ಔಷಧಿ ಇದ್ದು, ಕೊರೊನಿಲ್ ಮಾತ್ರೆಗಳು, ಸ್ವಾಸರಿ ವಾತಿ ಹಾಗೂ ಅನು ತೈಲವನ್ನು ಒಳಗೊಂಡಿದೆ. ಬಾಬಾ ರಾಮ್ದೇವ್ ಅವರು ಕೊರೊನಾ ಮೊದಲ ಅಲೆ ಪೀಕ್ನಲ್ಲಿದ್ದಾಗ ಜೂನ್ 23ರಂದು ಆಯುರ್ವೇದ ಔಷಧಿಯಾದ ಕೊರೊನಿಲ್ನ್ನು ಪರಿಚಯಿಸಿದ್ದರು.
1 ಲಕ್ಷ ಸೋಂಕಿತರಿಗೆ ಪತಂಜಲಿಯ ಕೊರೊನಿಲ್ ಔಷಧಿ ಉಚಿತವಾಗಿ ಹಂಚಿದ ಹರಿಯಾಣ ಸರ್ಕಾರ
18- 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಪಡೆಯಲು ಆನ್ಲೈನ್ ನೇಮಕಾತಿ ಬೇಕಿಲ್ಲ !
ಲಸಿಕೆ ತೆಗೆದುಕೊಳ್ಳುವವರ ಅನುಕೂಲಕ್ಕಾಗಿ ಕೋವಿನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು. ಆದರೆ 18ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದ, ವ್ಯಾಕ್ಸಿನೇಷನ್ ಸ್ಲಾಟ್ಗಳನ್ನು ಕಾಯ್ದಿರಿಸಲು ಸಾವಿರಾರು ಜನರು ಪ್ರತಿದಿನ ಕೋ ವಿನ್ ಪೋರ್ಟಲ್ಗೆ ಭೇಟಿ ನೀಡುತ್ತಿದ್ದಾರೆ.. ಹಾಗಾಗಿ, ಆರೋಗ್ಯ ಸಚಿವಾಲಯವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 18-44 ವರ್ಷದೊಳಗಿನ ಜನರು ಯಾವುದೇ ಸರ್ಕಾರಿ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನೇಮಕಾತಿ ಇಲ್ಲದೆ ಲಸಿಕೆ ಪಡೆಯಬಹುದು ಎಂದು ಸಚಿವಾಲಯ ಹೇಳಿದೆ. ಇದು ಮೇ 24 ರಿಂದ ಪ್ರಾರಂಭವಾಗಿದೆ.
ನೋಂದಣಿ ಪ್ರಕ್ರಿಯೆಯು ಕಡ್ಡಾಯವಾಗಿದ್ದರೂ, ಈಗ 18-44 ವರ್ಷ ವಯಸ್ಸಿನವರು ಲಸಿಕೆ ಪಡೆಯಲು ಆನ್ಲೈನ್ ನೇಮಕಾತಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.
ನೀವು ಈಗಾಗಲೇ ನೋಂದಾಯಿಸಿಕೊಂಡಿದ್ದರೆ ಅದು ಒಳ್ಳೆಯದು, ಇಲ್ಲದಿದ್ದರೆ ನೀವು ವ್ಯಾಕ್ಸಿನೇಷನ್ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಮತ್ತು ಅದರ ನಂತರ ನಿಮಗೆ ಲಸಿಕೆ ನೀಡಲಾಗುತ್ತದೆ. ಆನ್ಲೈನ್ ನೇಮಕಾತಿಯಿಂದಾಗಿ ಅನೇಕ ಸ್ಥಳಗಳಲ್ಲಿ ಲಸಿಕೆ ವ್ಯರ್ಥವಾಗುತ್ತಿರುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.
18- 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಪಡೆಯಲು ಆನ್ಲೈನ್ ನೇಮಕಾತಿ ಬೇಕಿಲ್ಲ !
ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಬ್ಲಾಕ್ ಫಂಗಸ್ ಗೆ ಮುಖ್ಯ ಕಾರಣ – ಆರೋಗ್ಯ ಸಚಿವಾಲಯ
ದೇಶದಲ್ಲಿ ಕೊರೋನಾ ಮತ್ತು ವ್ಯಾಕ್ಸಿನೇಷನ್ ಗೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ, ಮಕ್ಕಳಲ್ಲಿ ಸೋಂಕು ಬಹಳ ವಿರಳ ಎಂದು ಹೇಳಿದ್ದಾರೆ.
ನಾವು ಮೊದಲ ಮತ್ತು ಎರಡನೆ ಅಲೆಯ ಕೊರೋನಾದಲ್ಲಿ ವೃದ್ಧರು ಮತ್ತು ಯುವಕರಿಗೆ ಹೆಚ್ಚು ಅಪಾಯಕಾರಿಯಾಗಿರುವುದನ್ನು ನೋಡಿದ್ದೇವೆ. ಆದರೆ ಕೋವಿಡ್ನ ಮೂರನೇ ಅಲೆಯು ಮಕ್ಕಳಿಗೆ ಅಪಾಯಕಾರಿಯಾಗುವಂತೆ ತೋರುತ್ತಿಲ್ಲ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಮ್ಯೂಕರ್ ಮೈಕೋಸಿಸ್ (ಬ್ಲಾಕ್ ಫಂಗಸ್), ಕ್ಯಾಂಡಿಡಾ ಮತ್ತು ಎಸ್ಪೊರೊಜೆನಸ್ ಸೋಂಕಿನಿಂದ ಸೋಂಕಿಗೆ ಒಳಗಾಗುತ್ತಾರೆ ಎಂದು ಅವರು ಹೇಳಿದರು. ಈ ಶಿಲೀಂಧ್ರಗಳು ಮುಖ್ಯವಾಗಿ ಸೈನಸ್, ಮೂಗು, ಕಣ್ಣುಗಳ ಸುತ್ತಲಿನ ಮೂಳೆಯಲ್ಲಿ ಕಂಡುಬರುತ್ತವೆ ಮತ್ತು ಮೆದುಳಿಗೆ ಪ್ರವೇಶಿಸಬಹುದು. ಸಾಂದರ್ಭಿಕವಾಗಿ ಶ್ವಾಸಕೋಶದಲ್ಲಿ (ಪಲ್ಮನರಿ ಮ್ಯೂಕರ್ ಮೈಕೋಸಿಸ್) ಅಥವಾ ಜಠರಗರುಳಿನ ಪ್ರದೇಶದಲ್ಲಿ ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,22,000 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ. ಇದು 40 ದಿನಗಳ ನಂತರ ವರದಿಯಾದ ಅತಿ ಕಡಿಮೆ ಪ್ರಕರಣಗಳಾಗಿದೆ. ಜಿಲ್ಲಾ ಮಟ್ಟದಲ್ಲಿ ಕೂಡ ಕೊರೋನಾ ಪ್ರಕರಣಗಳು ಕ್ಷೀಣಿಸುತ್ತಿವೆ. ಮೇ 3 ರವರೆಗೆ ಚೇತರಿಕೆ ದರ 81.7% ಆಗಿತ್ತು, ಈಗ ಅದು 88.7% ಕ್ಕೆ ಏರಿದೆ. ಕಳೆದ 22 ದಿನಗಳಿಂದ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದೆ. ಮೇ 3 ರ ಸಮಯದಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 17.13% ಆಗಿದ್ದು, ಈಗ ಅದು 10.17% ಕ್ಕೆ ಇಳಿದಿದೆ. ಕಳೆದ 2 ವಾರಗಳಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು 1 ಮಿಲಿಯನ್ ಇಳಿಕೆ ಕಂಡುಬಂದಿದೆ.
ರೋಗನಿರೋಧಕ ಶಕ್ತಿ ಕಡಿಮೆಯಾಗುವುದು ಬ್ಲಾಕ್ ಫಂಗಸ್ ಗೆ ಮುಖ್ಯ ಕಾರಣ – ಆರೋಗ್ಯ ಸಚಿವಾಲಯ
ಮೆಟ್ರೋ ರೈಲು ದುರಂತ – 200 ಕ್ಕೂ ಹೆಚ್ಚು ಮಂದಿಗೆ ಗಾಯ
ಮಲೇಷ್ಯಾ: ಮಲೇಷ್ಯಾದಲ್ಲಿ ಮೆಟ್ರೋ ರೈಲು ದುರಂತದಲ್ಲಿ 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೆಟ್ರೊ ರೈಲು ಡಿಕ್ಕಿಯಾಗಿ 200ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವಿಶ್ವದ ಅತಿ ಎತ್ತರದ ಅವಳಿ ಗೋಪುರಗಳಾದ ಪೆಟ್ರೋನಾರ್ಸ್ ಟವರ್ಸ್ ಬಳಿಯ ಸುರಂಗದಲ್ಲಿ ಸೋಮವಾರ 213 ಪ್ರಯಾಣಿಕರನ್ನೊಳಗೊಂಡ ಮೆಟ್ರೊ ರೈಲು ಹಾಗೂ ಪರೀಕ್ಷಾರ್ಥ ಪ್ರಯಾಣದಲ್ಲಿದ್ದ ಖಾಲಿ ರೈಲು ಪರಸ್ಪರ ಡಿಕ್ಕಿಯಾಗಿವೆ.
2 ಲಘು ರೈಲುಗಳು ಡಿಕ್ಕಿ ಹೊಡೆದದ್ದರಿಂದ 200ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. 23 ವರ್ಷಗಳ ಮೆಟ್ರೊ ರೈಲು ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ದೊಡ್ಡ ಅಪಘಾತ ಸಂಭವಿಸಿದೆ.
ಅಪಘಾತದ ಸಮಯದಲ್ಲಿ ಪರೀಕ್ಷಾರ್ಥ ರೈಲು ಗಂಟೆಗೆ 20 ಕಿ.ಮೀ. ಹಾಗೂ ಪ್ರಯಾಣಿಕರಿದ್ದ ರೈಲು ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದವು ಎಂದು ಸಾರಿಗೆ ಸಚಿವ ವೀ ಕಾ ಸಿಯಾಂಗ್ ತಿಳಿಸಿದ್ದಾರೆ. ಗಾಯಾಳುಗಳನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕಡಿಸಲಾಗ್ತಿದೆ.
ಮೆಟ್ರೋ ರೈಲು ದುರಂತ – 200 ಕ್ಕೂ ಹೆಚ್ಚು ಮಂದಿಗೆ ಗಾಯ
ಪಾಕಿಸ್ತಾನಕ್ಕೆ ನೆರವು ಸ್ಥಗಿತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ – ಅಮೆರಿಕಾ
ಅಮೆರಿಕಾ : ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನಕ್ಕೆ ಆರ್ಥಿಕ ನೆರವಿನ ವಿಚಾರದಲ್ಲಿ ತೆಗೆದುಕೊಂಡಿದ್ದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದೇ ಅದನ್ನೇ ಮುಂದುವರೆಸಲು ಪ್ರಸ್ತುತ ಅಧ್ಯಕ್ಷ ಜೋ ಬೈಡೆನ್ ಅವರು ತೀರ್ಮಾನಿಸಿದ್ದಾರೆ.
ಹೌದು.. 2018ರ ಜನವರಿಯಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ಟ್ರಂಪ್ ಅವರು ಪಾಕಿಸ್ತಾನಕ್ಕೆ ನೀಡುವ ಎಲ್ಲ ರೀತಿಯ ಭದ್ರತಾ ನೆರವನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದರು. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಇಸ್ಲಾಮಾಬಾದ್ ವಹಿಸುತ್ತಿರುವ ಪಾತ್ರ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದರು.
ಈ ನಿಲುವಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಪೆಂಟಗಾನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನಕ್ಕೆ ನೀಡುವ ಭದ್ರತಾ ನೆರವು ಈಗ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಈ ನಿಲುವು ಬದಲಾಗುತ್ತದೆಯೇ ಎಂಬ ಊಹಾಪೋಹಗಳಿಗೆ ನಾನು ಉತ್ತರಿಸಲು ಆಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಬೈಡೆನ್ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ತೆಗೆದುಕೊಂಡಿದ್ದ ನಿರ್ಧಾರ ಕೈಬಿಡಬಹುದಾ ಎಂಬ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ನಿರಾಸೆಯಾಗಿದೆ.








