ಆಪ್ ಆಧಾರಿತ ಸಾರಿಗೆ ಸೇವೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಓಲಾ, ಉಬರ್, ರಾಪಿಡೋ (ಬೈಕ್ ಟ್ಯಾಕ್ಸಿ), ಪೋರ್ಟರ್ ಸೇರಿದಂತೆ ಹಲವು ಆಪ್ ಆಧಾರಿತ ಕಂಪನಿಗಳ ವಿರುದ್ಧ ಫೆಬ್ರವರಿ 7ರಂದು ದೇಶವ್ಯಾಪಿ ಮುಷ್ಕರ ನಡೆಸಲು ಸಾರಿಗೆ ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.
ಸಾರಿಗೆ ಕಾರ್ಮಿಕ ಸಂಘಟನೆಗಳ ಆರೋಪದಂತೆ, ಈ ಕಂಪನಿಗಳು ನಿಯಮ ಬಾಹಿರವಾಗಿ ದರ ನಿಗದಿ ಮಾಡುತ್ತಿದ್ದು, ಯಾವುದೇ ಸರಕಾರಿ ನಿಯಂತ್ರಣವಿಲ್ಲದೆ ದರಗಳನ್ನು ಏಕಾಏಕಿ ಏರಿಳಿತಗೊಳಿಸುತ್ತಿವೆ. ಇದರಿಂದ ಚಾಲಕರಿಗೆ ಸಮರ್ಪಕ ಆದಾಯ ಸಿಗುತ್ತಿಲ್ಲ, ಮತ್ತೊಂದೆಡೆ ಪ್ರಯಾಣಿಕರು ಅತಿಯಾದ ದರ ಪಾವತಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಡ್ರೈವರ್‌ಗಳಿಗೆ ಕನಿಷ್ಠ ಆದಾಯ ಭರವಸೆ, ಪಾರದರ್ಶಕ ದರ ವ್ಯವಸ್ಥೆ, ಕಮಿಷನ್ ಕಡಿತ, ಸಾಮಾಜಿಕ ಭದ್ರತೆ ಹಾಗೂ ಸರಕಾರಿ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಫೆ.7ರಂದು ಚಾಲಕರು ಆ್ಯಪ್‌ಗಳನ್ನು ಆಫ್ ಮಾಡಿ ಸಂಪೂರ್ಣವಾಗಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಂಘಟನೆಗಳು ಘೋಷಿಸಿವೆ.
ಈ ಮುಷ್ಕರದಿಂದಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದೈನಂದಿನ ಪ್ರಯಾಣಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲೂ ಹೆಚ್ಚಿನ ಒತ್ತಡ ಬೀಳುವ ನಿರೀಕ್ಷೆಯಿದೆ. ಸರ್ಕಾರ ಮತ್ತು ಆಪ್ ಕಂಪನಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಚಾಲಕ ಸಂಘಟನೆಗಳು ಆಗ್ರಹಿಸಿವೆ.








