10 ದಿನಗಳ ಬಳಿಕ ಜಾಮೀನಿನ ಮೇಲೆ ಹೊರ ಬಂದ ರಾಣಾ ದಂಪತಿಗಳು
ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಷಯದಲ್ಲಿ ಟೀಕೆ ಹಾಗೂ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ ಆರೋಪದ ಮೇಲೆ ಬಂಧಿತವಾಗಿದ್ದ ರಾಣಾ ಹಾಗೂ ಅವರ ಪತಿ ಶಾಸಕ ರವಿ ರಾಣಾ ಅವರಿಗೆ ಜಾಮೀನು ಸಿಕ್ಕಿದೆ.
ಏಪ್ರಿಲ್ 23ರಂದು ಅಮರಾವತಿಯ ಸಂಸದ ಬದ್ನೇರಾ ಶಾಸಕ ರವಿ ರಾಣಾ ಹಾಗೂ ಅವರ ಪತ್ನಿ ನವನೀತ್ ರಾಣಾ ಅವರನ್ನು ದ್ವೇಷ ಪ್ರಚೋದನಾ ಕೃತ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಬಂಧಿಸಲಾಗಿತ್ತು. 10 ದಿನಗಳ ಕಾಲ ಬಂಧನದಲ್ಲಿದ್ದ ದಂಪತಿಗಳಿಗೆ ಮುಂಬೈ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದಂಪತಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಖಾಸಗಿ ನಿವಾಸದ ಬಳಿ ಹನುಮಾನ್ ಚಾಲೀಸ ಪಠಿಸುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಅವರನ್ನು ಬಂಧಿಸಿದ್ದರಿಂದ ಆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.
ದಂಪತಿ ವಿರುದ್ಧ ಸೆಕ್ಷನ್ 153(ಎ)(ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೇ ಸರ್ಕಾರ ಯಂತ್ರಕ್ಕೆ ಸವಾಲು ಹಾಕಿದ ಹಾಗೂ ಉದ್ಧವ್ ಠಾಕ್ರೆ ವಿರುದ್ಧ ಟೀಕೆ ಮಾಡಿದ್ದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್ 124(ಎ)(ದೇಶದ್ರೋಹ) ಅಡಿಯಲ್ಲಿ ಆರೋಪ ಮಾಡಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರತ್ ತಿಳಿಸಿದ್ದರು.








