ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರನ ದಂಡಯಾತ್ರೆಯ ನಡುವೆ ವಿಧಾನಪರಿಷತ್ ಚುನಾವಣೆಗೆ ತಯಾರಿ ಆರಂಭವಾಗಿದೆ. ಕೊರೊನಾ ವೈರಸ್ ಹಾವಳಿ, ಇನ್ನೊಂದೆಡೆ ಜೂನ್ 20ರ ಒಳಗೆ ಖಾಲಿ ಇರುವ 5 ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಬೇಕಾದ ಚಾಲೆಂಜ್ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಆಕಾಂಕ್ಷಿತರ ಪರ-ವಿರೋಧ ಬ್ಯಾಟಿಂಗ್, ಬೌಲಿಂಗ್ ಕೂಡ ಜೋರಾಗಿ ನಡೆಯುತ್ತಿದೆ.
ಜಗ್ಗೇಶ್ ಪರ ಸಾಮ್ರಾಟ್ ಅಶೋಕ್ ಬ್ಯಾಟಿಂಗ್..?
ವಿಧಾನ ಪರಿಷತ್ ಸ್ಥಾನಕ್ಕೆ ಚಿತ್ರರಂಗ, ಸಾಹಿತ್ಯ, ಸಮಾಜಸೇವೆ ಸೇರಿದಂತೆ 5 ವಿವಿಧ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸರ್ಕಾರ ನಾಮನಿರ್ದೇಶನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚಿತ್ರರಂಗದ ಕೋಟಾದಡಿ ನಟ ಜಗ್ಗೇಶ್ ಬಗ್ಗೆ ಆರ್. ಅಶೋಕ್ ಒಲವು ತೋರಿದ್ದು, ಸಿಎಂ ಬಿ.ಎಸ್ ಯಡಿಯೂರಪ್ಪ ಮುಂದೆ ಈ ಬಗ್ಗೆ ಪ್ರಸ್ತಾಪಿಸಿದ್ದಾರಂತೆ.
ಹಾಗೇ ಜಗ್ಗೇಶ್ ಅವರನ್ನು ವಿಧಾನಪರಿಷತ್ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡುವುದರಿಂದ ಪಕ್ಷಕ್ಕೆ ಆಗುವ ಲಾಭಗಳ ಬಗ್ಗೆ ಕೂಡ ವಿವರಯುತ ಮಾಹಿತಿಯನ್ನು ಸಿಎಂ ಯಡಿಯೂರಪ್ಪಗೆ ಆರ್. ಅಶೋಕ್ ನೀಡಿದ್ದಾರಂತೆ.
ಜಗ್ಗೇಶ್ ನಾಮನಿರ್ದೇಶಿತ ಸದಸ್ಯರಾದ್ರೆ ಬಿಜೆಪಿಗೆ ಲಾಭವೇನು?
ಒಂದು ವೇಳೆ ನಟ ಜಗ್ಗೇಶ್ ಪರಿಷತ್ ನಾಮನಿದೇಶಿತ ಸದಸ್ಯರಾದ್ರೆ ಬಿಜೆಪಿಗೆ ಆಗುವ ಲಾಭಗಳನ್ನು ನೋಡೋದಾದ್ರೆ, ಕರ್ನಾಟಕದ ಚಿತ್ರೋದ್ಯಮದಲ್ಲಿ ಜಗ್ಗೇಶ್ ಅವಿರತ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ರಾಜ್ಯಾದ್ಯಂತ ಚುನಾವಣಾ ಸಂದರ್ಭದಲ್ಲಿ ಬಳಸಿಕೊಳ್ಳಬಹುದು. ಜಗ್ಗೇಶ್ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಪುಷ್ಠಿ ಸಿಗಬಹುದು. ಜಗ್ಗೇಶ್ ಗೆ ರಾಜ್ಯದ ಉದ್ದಗಲದ ಪರಿಚಯವಿದೆ. ಮಾತ್ರವಲ್ಲ ಸೈದ್ಧಾಂತಿಕವಾಗಿ ಕೂಡ ಸಂಘಟನೆಗೆ ಬದ್ಧರಾಗಿರುತ್ತಾರೆ.