ಚಾಮರಾಜನಗರ: ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳಿಂದ ನಡೆದ ಮೂವರು ಶಂಕಿತ ಬೇಟೆಗಾರರ ಎನ್‌ಕೌಂಟರ್ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯದ ಗಡಿ ಜಿಲ್ಲೆಯಲ್ಲಿ ಭಾಷೆ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕೋಮು ಸಂಘರ್ಷ ಉಂಟುಮಾಡಲು ನಕ್ಸಲ್ ಪ್ರೇರಿತ ಎನ್ನಲಾದ ಟೈಗರ್ ಆಫ್ ಜಸ್ಟೀಸ್ ಸಂಘಟನೆ ಭೀಕರ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.
ಕನ್ನಡಿಗರ ವಿರುದ್ಧ ದಿವ್ಯಾನಂದನ ಪ್ರಚೋದನಾಕಾರಿ ಹೇಳಿಕೆ
ಟೈಗರ್ ಆಫ್ ಜಸ್ಟೀಸ್ ಸಂಘಟನೆಯ ಅಧ್ಯಕ್ಷ ದಿವ್ಯಾನಂದ ಎಂಬಾತ ಮಾತನಾಡಿದ್ದಾನೆನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಮಿಳು ಸಮುದಾಯವನ್ನು ಉದ್ದೇಶಿಸಿ ಮಾತನಾಡಿರುವ ಈತ, ಕನ್ನಡಿಗರ ದಬ್ಬಾಳಿಕೆಯನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಗುಡುಗಿದ್ದಾನೆ. ತಮಿಳುನಾಡಿನಿಂದ ವಲಸೆ ಬಂದ ನಮಗೆ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯ ನೀಡುತ್ತಿಲ್ಲ ಮತ್ತು ನಮ್ಮವರ ಕೊಲೆಯಾಗುತ್ತಿದ್ದರೂ ಅನ್ಯಾಯವಾಗುತ್ತಿದೆ ಎಂದು ವಿಷ ಕಾರಿದ್ದಾನೆ.
ರಾಜಕೀಯ ಪಕ್ಷಗಳಿಗೆ ಸವಾಲು
ಈ ಆಡಿಯೋದಲ್ಲಿ ಕೇವಲ ಭಾಷೆಯಲ್ಲದೆ, ರಾಜಕೀಯವಾಗಿಯೂ ತಮಿಳಿಗರನ್ನು ಸಂಘಟಿಸಲು ಪ್ರಯತ್ನಿಸಲಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಂತಹ ಪ್ರಮುಖ ಪಕ್ಷಗಳನ್ನು ಧಿಕ್ಕರಿಸುವಂತೆ ಕರೆ ನೀಡಿರುವ ದಿವ್ಯಾನಂದ, ನಮ್ಮ ಪ್ರದೇಶದಲ್ಲಿರುವ 65 ಸಾವಿರ ಮತಗಳೇ ನಮ್ಮ ಶಕ್ತಿ ಎಂದು ಘೋಷಿಸಿದ್ದಾನೆ. ಒಬ್ಬ ತಮಿಳಿಗನನ್ನು ಮುಟ್ಟಿದರೂ ನಾವು ಒಂದೇ ಒಂದು ಮತವನ್ನು ಯಾರಿಗೂ ಹಾಕಬಾರದು ಎಂಬ ಬಹಿರಂಗ ಬೆದರಿಕೆ ಹಾಕುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಅಣಕಿಸಿದ್ದಾನೆ.
ಧರ್ಮದ ಹೆಸರಿನಲ್ಲಿ ಗುಂಪುಗಾರಿಕೆಗೆ ಕುಮ್ಮಕ್ಕು
ಸಂಘಟನೆಯ ಸಂಚು ಇಲ್ಲಿಗೆ ನಿಂತಿಲ್ಲ, ಇದಕ್ಕೆ ಧಾರ್ಮಿಕ ಬಣ್ಣವನ್ನೂ ಹಚ್ಚಲು ದಿವ್ಯಾನಂದ ಮುಂದಾಗಿದ್ದಾನೆ. ಚರ್ಚ್‌ಗಳು ನಮ್ಮ ಬೆನ್ನಿಗೆ ನಿಂತಿವೆ ಎಂದು ಹೇಳಿಕೊಂಡಿರುವ ಈತ, ತಮಿಳು ಪಡಿಯಾಚ್ಚಿ ಕ್ರಿಶ್ಚಿಯನ್ನರು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಚೋದಿಸಿದ್ದಾನೆ. ಅರಣ್ಯ ಪ್ರದೇಶದ ಗಡಿಭಾಗದಲ್ಲಿ ವಾಸಿಸುವ ಜನರಲ್ಲಿ ಭೀತಿ ಮತ್ತು ವೈಷಮ್ಯ ಹುಟ್ಟುಹಾಕುವ ಈತನ ಮಾತುಗಳು ನಕ್ಸಲ್ ಚಟುವಟಿಕೆಯ ಮಾದರಿಯನ್ನು ಹೋಲುತ್ತಿವೆ. ಪೊಲೀಸ್ ಇಲಾಖೆ ಕೇಸ್ ದಾಖಲಿಸಿದರೂ ತಾನು ಕಾನೂನುಬದ್ಧವಾಗಿ ಎದುರಿಸಲು ಸಿದ್ಧ ಎಂದು ಸವಾಲು ಹಾಕುವ ಮೂಲಕ ದಿವ್ಯಾನಂದ ದರ್ಪ ಮೆರೆದಿದ್ದಾನೆ.
ಈಗಾಗಲೇ ಹನೂರು ಎನ್‌ಕೌಂಟರ್ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವಾಗ, ಇಂತಹ ಪ್ರಚೋದನಾಕಾರಿ ಹೇಳಿಕೆಗಳು ಗಡಿಭಾಗದ ಶಾಂತಿಯನ್ನು ಕದಡುವ ಸಾಧ್ಯತೆ ಇದೆ. ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.








