ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಸಿದ್ದು, ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಲಾಕ್ ಡೌನ್ ನಿಂದ ಕಂಗೆಟ್ಟಿರುವ ಆರ್ಥಿಕತೆಗೆ ಚೇತರಿಕೆ ತುಂಬುವ ಸಲುವಾಗಿ ರಾಜ್ಯ ಸರ್ಕಾರ ಕೆಲವು ವಿನಾಯಿತಿಗಳನ್ನು ನೀಡಿದೆ. ಅಲ್ಲದೇ ಸಿಎಂ ಯಡಿಯೂರಪ್ಪ ರೈತರು, ಆಟೋ, ಟ್ಯಾಕ್ಸಿ ಚಾಲಕರು, ನೇಕಾರರು, ಕಟ್ಟಡ ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳಿಗೆ ಮಿನಿ ಬಜೆಟ್ ಮಾದರಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಇದರ ಬೆನ್ನಲ್ಲೆ ಪ್ರತಿಪಕ್ಷ ಕಾಂಗ್ರೆಸ್, ವಿಶೇಷ ಅಧಿವೇಶನ ಕರೆಯಿರಿ ಎಂದು ಪಟ್ಟು ಹಿಡಿದಿದೆ.
ಈ ನಿಟ್ಟಿನಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿಯಾಗಿ ವಿಶೇಷ ಅಧಿವೇಶನ ಬಗ್ಗೆ ಚರ್ಚಿಸಲಿದ್ದಾರೆ. ಬೆಳಗ್ಗೆ 11:30 ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮೂವರು ನಾಯಕರು ಚರ್ಚೆ ನಡೆಸಲಿದ್ದಾರೆ. ಈ ವೇಳೆ ವಿಶೇಷ ಅಧಿವೇಶನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.








