ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್, ಲವ್ ಸ್ಟೋರಿ, ಕ್ರೈಮ್-ಥಿಲ್ಲರ್ ಕಥೆಯಾಧಾರಿತ ಸಿನಿಮಾಗಳೇ ಹೆಚ್ಚು ನಿರ್ಮಾಣವಾಗುತ್ತಿದೆ. ಇದರ ಮಧ್ಯೆ ಕನ್ನಡ ಚಿತ್ರರಂಗಕ್ಕೆ ಹೊಸ ಬಗೆಯ ಕತೆಯನ್ನು ಪರಿಚಯಿಸುವ ನೀಲವಂತಿ ಗ್ರಂಥವನ್ನು ಆಧರಿಸಿದ ನೀಲವಂತಿ ಎಂಬ ಸಿನಿಮಾವೊಂದು ತಯಾರಾಗುತ್ತಿದೆ. ಈ ಚಿತ್ರ ಭಿನ್ನ ರೀತಿಯ ಹಾರರ್ ಮತ್ತು ಫ್ಯಾಂಟಸಿ ಅಂಶಗಳಿಂದ ಕೂಡಿದೆ. ಟೈಟಲ್ ರಿಲೀಸ್ ಕಾರ್ಯಕ್ರಮವನ್ನು ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ನೇರವೇರಿಸಲಾಯಿತು. ನಟ ಡಾರ್ಲಿಂಗ್ ಕೃಷ್ಣ ಅವರು ಟೈಟಲ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಟೈಟಲ್ ಬಿಡುಗಡೆ ವೇಳೆ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಟೈಟಲ್ ಆಗಿರಲಿ. ಪುಸ್ತಕದ ಬಗ್ಗೆ ಹೇಳಿರುವುದು. ಹಾಗೇಯೇ ಅದಕ್ಕೆ ಹಾರರ್ ಟಚ್ ಕೊಟ್ಟಿರುವುದು ನೋಡಿದರೆ ಬಹಳ ಅದ್ಭುತವಾಗಿ ಮಾಡಿದ್ದಾರೆ ಅನ್ನುವುದು ಗೊತ್ತಾಗುತ್ತಿದೆ. ನನಗೆ ಹಾರರ್ ಸಬ್ಜೆಕ್ಟ್ ಇಷ್ಟ. ಸಿನಿಮಾ ತುಂಬಾ ಡಿಮ್ಯಾಂಡ್ ಮಾಡುತ್ತದೆ. ಮೇಕಿಂಗ್ , ಬಜೆಟ್ , ಎಕ್ಸಿಬ್ಯೂಷನ್ ಇರಬಹುದು. ತುಂಬಾ ಡಿಮ್ಯಾಂಡ್ ಮಾಡುವ ಸಬ್ಜೆಕ್ಟ್. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಚಿತ್ರ ತುಂಬಾ ಶ್ರಮ ಕೇಳುತ್ತದೆ. ಅದರಂತೆ ಶ್ರಮ ಹಾಕಿ ಮಾಡಿ. ಇದು ಕನ್ನಡಕ್ಕೆ ಬೇರೆ ರೀತಿಯ ಸಿನಿಮಾವಾಗುತ್ತದೆ. ಇಡೀ ತಂಡಕ್ಕೆ ಒಳ್ಳೆಯದು ಆಗಲಿ ಎಂದರು.
ಕಥೆಯ ವಿಶಿಷ್ಟತೆಯ ಕುರಿತು ಚಿತ್ರದ ನಾಯಕ ಕರಣ್ ಆರ್ಯನ್, ನೀಲವಂತಿ ಹಾರರ್ ಸಿನಿಮಾವಾಗಿದ್ದು, ಇದು ನೈಜ ಘಟನೆಯ ಸುತ್ತು ತಿರುಗುತ್ತದೆ. ಇದು ಮೊದಲು ಯಾರೂ ಸ್ಪರ್ಶಿಸದ ಕಥಾ ಹಂದರ. ಈ ಸಿನಿಮಾ ನನಗೆ ಹೊಸ ಆವಕಾಶ ನೀಡಲಿದೆ. ನಾನು ಮೊದಲು ಹಾರರ್ ಚಿತ್ರದ ಮೂಲಕವೇ ಇಂಡಸ್ಟ್ರೀಗೆ ಬಂದಿದ್ದು. ಆದರೆ ಅಷ್ಟು ಸಕ್ಸಸ್ ಸಿಗಲಿಲ್ಲ. ಹೀಗಾಗಿ ಖಳನಾಯಕನಾಗಿ ಸಿನಿಮಾ ಮಾಡೋಣಾ. ಆ ಬಳಿಕ ಹೀರೋ ಆಗಬೇಕು ಎಂದುಕೊಂಡಿದ್ದೆ. ಒಂದಷ್ಟು ದೊಡ್ಡ ದೊಡ್ಡ ಪ್ರೊಡಕ್ಷನ್ ನಲ್ಲಿ ವಿಲನ್ ಆಗಿ ನಟಿಸಿದ್ದೇನೆ. ಈಗ ಹೀರೋ ಆಗಿ ಲವ್ ಹಾಗೂ ಮಾಸ್ ಸಬ್ಜೆಕ್ಟ್ ಮಾಡುತ್ತಿದ್ದೇನೆ. ನೀಲವಂತಿ ಹಾರರ್ ಸಿನಿಮಾ. ಕಥೆ ಬಹಳ ವಿಭಿನ್ನ ಎನಿಸಿತು ಎಂದು ಹೇಳಿದ್ದಾರೆ.
ಚಿತ್ರದ ನಿರ್ದೇಶಕ ಶ್ರೀಮುರಳಿ ಪ್ರಸಾದ್ ನೀಲವಂತಿ ಕಥೆಯು ಗ್ರಂಥದಿಂದ ಪ್ರೇರಿತವಾಗಿದ್ದು, ಫಿಕ್ಷನ್ ಮಿಶ್ರಿತ ಕಥಾವಸ್ತುವಾಗಿದೆ. ನನ್ನ ಸ್ನೇಹಿತ ಈ ಕಥೆಯನ್ನು ಇಷ್ಟಪಟ್ಟು ಅದಕ್ಕೆ ಜೀವ ತುಂಬಿದ್ದಾರೆ. ಸಿನಿಮಾ ಟಾಕ್ ಕ್ರಿಯೇಟ್ ಮಾಡುವ ಭರವಸೆಯಿದೆ, ಎಂದು ವಿವರಿಸಿದರು.
ನೀಲವಂತಿ ಸಿನಿಮಾವನ್ನು ಶ್ರೀಮುರಳಿ ಪ್ರಸಾದ್ ನಿರ್ದೇಶನ ಮಾಡುತ್ತಿದ್ದಾರೆ. ಒಂದಷ್ಟು ಚಿತ್ರಗಳಲ್ಲಿ ಅಸೋಸಿಯೇಟ್ ಹಾಗೂ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಕೆಲವೊಂದಿಷ್ಟು ಚಿತ್ರಗಳಲ್ಲಿ ಖಳನಾಯಕ ಬಣ್ಣ ಹಚ್ಚಿರುವ ಕರಣ್ ಆರ್ಯನ್ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದು, ಬಹುನಿರೀಕ್ಷಿತ ಮ್ಯಾಕ್ಸ್ ಮತ್ತು ಉತ್ತರಕಾಂಡ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಮಲಯಾಳಂ ನಟಿ ಮೋಕ್ಷಾ ಬಹಳ ಇಷ್ಟಪಟ್ಟು ಈ ಕಥೆ ಒಪ್ಪಿಕೊಂಡಿದ್ದಾರೆ. ಇಲ್ಲಿ ಕರಣ್ ಗೆ ಜೋಡಿಯಾಗಿ ಅವರು ನಟಿಸುತ್ತಿದ್ದಾರೆ. ಉಳಿದಂತೆ ಕಾರ್ತಿಕ್ ಸುಂದರಂ, ದೀಪಿಕಾ ಕೆಟಿ, ಕಾವ್ಯ ಗೌಡ, ವಿರಾಟ್, ಭಾರ್ಗವ್, ಭಾಸ್ಕರ್ ಗೌಡ, ಆನಂದ ಕೆಂಗೇರಿ , ವಂಶಿ ಗೌಡ, ಕ್ಯಾಂಡಿ ದಾಸ್, ಧನಿ ಬೋಸ್ ತಾರಾಬಳಗದಲ್ಲಿದ್ದಾರೆ.
ಚಿತ್ರದ ಮೊದಲ ಹಂತದ 30% ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗವನ್ನು ಸಕಲೇಶಪುರ ಮತ್ತು ಕಳಸ ಪ್ರದೇಶಗಳಲ್ಲಿ ಚಿತ್ರೀಕರಿಸಲು ಯೋಜನೆ ಮಾಡಲಾಗಿದೆ.
ಹಾರರ್ ಮತ್ತು ಫ್ಯಾಂಟಸಿ ಶೈಲಿಯ ‘ನೀಲವಂತಿ’ ಕನ್ನಡ ಚಿತ್ರರಂಗಕ್ಕೆ ಹೊಸ ರೀತಿಯ ಕಥಾ ಅನಿಸಿಕೆ ನೀಡಲಿದ್ದು, ಪ್ರೇಕ್ಷಕರಿಗೆ ವಿಶೇಷ ಅನುಭವ ತರುವ ಭರವಸೆಯಿದೆ.