`ಬಂಗಾರದ ಹುಡುಗ’ನಿಗೆ ಆರು ಕೋಟಿ ರೂಪಾಯಿ ಬಹುಮಾನ ಘೋಷಣೆ
ಟೋಕಿಯೊ : ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ತಂದಿರುವ ಚಿನ್ನದ ಹುಡುಗ ನೀರಜ್ ಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಹರಿಯಾಣ ಸರ್ಕಾರ 6 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ.
ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ನಲ್ಲಿ ನೀರಜ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ‘ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಇತಿಹಾಸ ಬರೆದಿದೆ. ನೀರಜ್ ಚೋಪ್ರಾ ಅವರ ಇಂದಿನ ಸಾಧನೆ ಅವಿಸ್ಮರಣೀಯ. ಅವರ ಸಾಧನೆ ಮತ್ತು ಉತ್ಸಾಹ ಎಲ್ಲರಿಗೂ ಪ್ರೇರಣೆ. ಚಿನ್ನ ಗೆದ್ದ ನೀರಜ್ ಅವರಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು. ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು. ಈ ಮೂಲಕ ದಿಗ್ಗಜರನ್ನೇ ಮೀರಿಸುವ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಅಲ್ಲದೆ ಭಾರತದ ಚಿನ್ನದ ಬರ ನೀಗಿಸಿದ್ದಾರೆ.