ICC World Cup Qualifiers 2023 ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಸೂಪರ್ ಓವರ್ ನಲ್ಲಿ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡಕ್ಕೆ ಬ್ರೆಂಡನ್ ಕಿಂಗ್ (76) ಹಾಗೂ ಜಾನ್ಸನ್ ಚಾರ್ಲ್ಸ್ (54) ಭರ್ಜರಿ ಆರಂಭ ಹಾಗೂ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಭರ್ಜರಿ ಆಟದಿಂದಾಗಿ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 374 ರನ್ ಗಳಿಸಿತ್ತು. ನಿಕೋಲಸ್ ಪೂರನ್ ಕೇವಲ 63 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್ನೊಂದಿಗೆ ಅಜೇಯ 104 ರನ್ ಬಾರಿಸಿದರು. 375 ರನ್ಗಳ ಕಠಿಣ ಗುರಿ ಪಡೆದ ನೆದರ್ಲ್ಯಾಂಡ್ಸ್ ತಂಡ 30ನೇ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಸಂಕಷ್ಟದಲ್ಲಿತ್ತು.
5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾರತೀಯ ಮೂಲದ ತೇಜ ನಿಡಮನೂರು ಉತ್ತಮ ಆಟ ಆಡಿದರು. ಕೇವಲ 68 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದರು. ತೇಜ ನಿಡಮನೂರು ಅವರ ಭರ್ಜರಿ ಬ್ಯಾಟಿಂಗ್ ಪರಿಣಾಮ ನೆದರ್ಲ್ಯಾಂಡ್ಸ್ ತಂಡಕ್ಕೆ ಕೊನೆಯ 5 ಓವರ್ಗಳಲ್ಲಿ 53 ರನ್ಗಳ ಅವಶ್ಯಕತೆಯಿತ್ತು. ಈ ಸಂದರ್ಭದಲ್ಲಿ ತೇಜ 76 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 11 ಫೋರ್ ಬಾರಿಸಿದ್ದ ತೇಜ (111) ಜೇಸನ್ ಹೋಲ್ಡರ್ಗೆ ವಿಕೆಟ್ ಒಪ್ಪಿಸಿದರು.
ಆನಂತರ 2 ಓವರ್ಗಳಲ್ಲಿ 30 ರನ್ಗಳ ಅವಶ್ಯಕತೆಯಿತ್ತು. ಆರ್ಯನ್ ದತ್ ಹಾಗೂ ಲೋಗನ್ ಜೊತೆಗೂಡಿ 21 ರನ್ ಚಚ್ಚಿದರು. ಅದರಂತೆ ಕೊನೆಯ ಓವರ್ನಲ್ಲಿ 9 ರನ್ಗಳ ಅಗತ್ಯತೆಯಿತ್ತು. ಅಲ್ಝಾರಿ ಜೋಸೆಫ್ ಎಸೆದ ಅಂತಿಮ ಓವರ್ನಲ್ಲಿ ನೆದರ್ಲ್ಯಾಂಡ್ಸ್ ತಂಡವು 8 ರನ್ ಮಾತ್ರ ಗಳಿಸಿತು. ಹೀಗಾಗಿ ರನ್ ಸಮವಾಯಿತು. ಪಂದ್ಯವು ಸೂಪರ್ ಓವರ್ ಗೆ ತೆರಳಿತು. ಆಗ ನೆದರ್ಲ್ಯಾಂಡ್ಸ್ 30 ರನ್ ಗಳಿಸಿತು. 31 ರನ್ಗಳ ಟಾರ್ಗೆಟ್ನೊಂದಿಗೆ ಸೂಪರ್ ಓವರ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು 5 ಎಸೆತಗಳಲ್ಲಿ 8 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿತು.








