ಭಾರತೀಯ ಕ್ರಿಕೆಟ್ ನ ಕೋಚಿಂಗ್ ವಿಭಾಗದಲ್ಲಿ ಈಗ ಬದಲಾವಣೆಯ ಪರ್ವ ನಡೆದಿದೆ. ರಾಹುಲ್ ದ್ರಾವಿಡ್ ಅವಧಿ ಮುಗಿಯುತ್ತಿದ್ದಂತೆ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ. ಈಗ ಸಹಾಯಕ ಕೋಚ್ ಗಳು ಕೂಡ ಹೊಸದಾಗಿ ತಂಡ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಸಹಾಯಕ ಕೋಚ್ ಗಳಾಗಿ ಮಾಜಿ ಆಲ್ ರೌಂಡರ್ ಅಭಿಷೇಕ್ ನಾಯಕ್ ಮತ್ತು ನೆದರ್ ಲ್ಯಾಂಡ್ ನ ಮಾಜಿ ಬ್ಯಾಟ್ಸ್‌ಮನ್ ರಿಯಾನ್ ಟೆನ್ ಡ್ಯೂಷ್ ರನ್ನು ಆಯ್ಕೆ ಮಾಡಲಾಗಿದೆ. ಆದರೆ ಖಾಯಂ ಬೌಲಿಂಗ್ ಕೋಚ್ ಇದುವರೆಗೆ ಆಯ್ಕೆಯಾಗಿಲ್ಲ. ಶ್ರೀಲಂಕಾ ಪ್ರವಾಸಕ್ಕೆ ಭಾರತದ ಮಾಜಿ ಸ್ಪಿನ್ನರ್ ಸಾಯಿರಾಜ್ ಬಹುತುಲೆ ಹಂಗಾಮಿ ಕೋಚ್ ಆಗಿ ತೆರಳಿದ್ದಾರೆ. ಆದರೆ ಅವರ ಅಧಿಕಾರಾವಧಿ ಲಂಕಾ ಪ್ರವಾಸದ ಮುಕ್ತಾಯದೊಂದಿಗೆ ಅಂತ್ಯವಾಗಲಿದೆ ಎನ್ನಲಾಗುತ್ತಿದೆ.
ಹೀಗಾಗಿ ಶ್ರೀಲಂಕಾ ಪ್ರವಾಸದ ನಂತರ ಭಾರತ ತಂಡ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಈ ಸರಣಿಗೂ ಮುನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ದೊಡ್ಡ ಬದಲಾವಣೆ ಕಾಣಲಿದೆ. ಹಂಗಾಮಿ ಬೌಲಿಂಗ್ ಕೋಚ್ ಆಗಿ ಭಾರತ ತಂಡದಲ್ಲಿರುವ ಸಾಯಿರಾಜ್ ಬಹುತುಲೆ ಅವರ ಬದಲು ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೋರ್ನೆ ಮೊರ್ಕೆಲ್ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಗಂಭೀರ್ ಮತ್ತು ಮೋರ್ಕೆಲ್ ಐಪಿಎಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಇಬ್ಬರೂ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಕೆಲಸ ಮಾಡಿದ್ದಾರೆ. 39 ವರ್ಷದ ಮೋರ್ನೆ ಮೊರ್ಕೆಲ್ 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದರು.








