ಬೆಂಗಳೂರು: ಕಳೆದ 14 ದಿನಗಳಲ್ಲಿ ಬೇರೆ ದೇಶಗಳಿಂದ ರಾಜ್ಯಕ್ಕೆ ಬಂದವರು ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ಇಂಗ್ಲೆಂಡ್‍ನಿಂದ ಬಂದವರು ಹಾಗೂ ಬೇರೆ ದೇಶಗಳಿಂದ ಬಂದವರಿಗೂ 7 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಯುನೈಟೆಡ್ ಕಿಂಗ್‍ಡಮ್‍ನಿಂದ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಯುನೈಟೆಡ್ ಕಿಂಗ್ ಡಮ್ ನಲ್ಲಿ ಹೊಸ ಬಗೆಯ ಕೊರೊನಾ ವೈರಾಣು ಕಂಡುಬಂದಿದೆ. ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದ್ದರೂ, ರೋಗದ ತೀವ್ರತೆ ಹೆಚ್ಚಿಸುವುದಿಲ್ಲ. ಆದರೂ ಅತ್ಯಂತ ಎಚ್ಚರಿಕೆ ವಹಿಸಬೇಕಿದೆ ಎಂದು ಸಚಿವರು ಹೇಳಿದರು.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಸುದ್ದಿಗಾರರರೊಂದಿಗೆ ಮಾತನಾಡಿದ ಸುಧಾಕರ್, ಯು.ಕೆ. ಡೆನ್ಮಾರ್ಕ್, ನೆದರ್‍ಲ್ಯಾಂಡ್ ಮೊದಲಾದ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬಗೆಯ ವೈರಾಣು ಕಾಣಿಸಿಕೊಂಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದಿಂದ ಪತ್ರ ಬಂದಿದ್ದು, ಮಂಗಳವಾರ ರಾತ್ರಿಯಿಂದ ಯು.ಕೆ.ಯಿಂದ ಬರುವ ವಿಮಾನಗಳ ಆಗಮನ ನಿಬರ್ಂಧಿಸಲಾಗುತ್ತದೆ.
ಭಾನವಾರ ರಾಜ್ಯಕ್ಕೆ 291 ಮಂದಿ ಬ್ರಿಟಿಷ್ ಏ ವೇಸ್ ನಿಂದ ಬಂದಿದ್ದರು. 246 ಮಂದಿ ಏರ್ ಇಂಡಿಯಾದಿಂದ ಬಂದಿದ್ದರು. 138 ಜನರು ನೆಗೆಟಿವ್ ವರದಿ ತಂದಿಲ್ಲ. ಇಂತಹವರನ್ನು ಒಂದು ವಾರ ಕಾಲ ಮನೆಯಲ್ಲೇ ನಿಗಾ ಇರಿಸಲಾಗುತ್ತದೆ. ಮಂಗಳವಾರದಿಂದ ವಿಮಾನ ನಿಲ್ದಾಣಗಳಲ್ಲಿ ಕಿಯೋಸ್ಕ್ ಇಟ್ಟು, ಅಲ್ಲಿ ತಪಾಸಣೆ ಮಾಡಲಾಗುವುದು ಎಂದು ಹೇಳಿದರು.
ಹೊಸ ವರ್ಷಾಚರಣೆಗೆ ಕಠಿಣ ರೂಲ್ಸ್
ಈ ವೈರಾಣು ಹರಡುವ ವೇಗ ಹೆಚ್ಚಿದೆ. ಆದರೆ ರೋಗ ತೀವ್ರವಾಗಿರುವುದಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ. ಹೊಸ ವರ್ಷದ ಅದ್ದೂರಿ ಆಚರಣೆಗಳನ್ನು ಕೈಬಿಡಬೇಕಿದೆ. ಕೆಲ ಹೋಟೆಲ್ ಗಳಲ್ಲಿ ಬುಕಿಂಗ್ ಮಾಡಿ ಆಚರಣೆ ಮಾಡಲು ಸಿದ್ಧತೆ ನಡೆಸಿರುವುದು ಕಂಡುಬಂದಿದೆ. ಹೀಗೆ ಮಾಡಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಜನರ ಆರೋಗ್ಯ ಮುಖ್ಯವಾಗಿದ್ದು, ಹೊಸ ಬಗೆಯ ವೈರಾಣು ಬರುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದರು.

ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದಂತೆ ವಹಿಸಬೇಕಾದ ಎಚ್ಚರಿಕೆ ಕುರಿತು ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ವಿವರಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








