ಕೇವಲ 6 ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸ್ಥಿತಿವಂತ ಜನಪ್ರತಿನಿಧಿಗಳು ಪಕ್ಷಾತೀತವಾಗಿ ರೈತರಿಂದ ಹಣ್ಣು ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಿ ಎಂದು ಮನವಿ ಮಾಡಿಕೊಂಡಿದ್ದರು. ಅದರ ಫಲಶೃತಿ ಎಂಬಂತೆ ಹಲವು ಕಾಂಗ್ರೆಸ್ ನಾಯಕರು ಕೃಷಿಕರಿಂದ ಟನ್ ಗಟ್ಟಲೇ ತರಕಾರಿ ಹಣ್ಣು ಖರೀದಿಸಿದ್ದಾರೆ.
* ದೇವನಹಳ್ಳಿ ರೈತರಿಂದ 100 ಟನ್ ತರಕಾರಿ ಖರೀದಿಸಿದ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ತಮ್ಮ ಕ್ಷೇತ್ರ ಗಾಂಧಿನಗರದ ಬಡವರಿಗೆ ಹಂಚಲು ಯೋಜನೆ ರೂಪಿಸಿದ್ದಾರೆ.
* ದೇವನಹಳ್ಳಿ ಮತ್ತು ಶಿಡ್ಲಘಟ್ಟದಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ 20 ಟನ್ ತರಕಾರಿ ಖರಿದಿ ಮಾಡಿದ್ದಾರೆ ಮತ್ತು ಬ್ಯಾಟರಾಯನಪುರದಲ್ಲಿ ಹಂಚಲು ತೀರ್ಮಾನಿಸಿದ್ದಾರೆ
* ತುಮಕೂರಿನ ಗ್ರಾಮೀಣ ಶಾಸಕ ಜೆಡಿಎಸ್ ನ ಗೌರೀಶಂಕರ್ ಬಾಳೆ, ಟೊಮ್ಯಾಟೋ, ನುಗ್ಗೇಕಾಯಿ, ಎಲೆಕಾಯಿಗಳನ್ನು ರೈತರಿಂದ ಕೊಂಡುಕೊಂಡಿದ್ದಾರೆ
* ಕುಣಿಗಲ್ ಶಾಸಕ ಡಾ. ರಂಗನಾಥ್ ತಮ್ಮ ಕ್ಷೇತ್ರದ ರೈತರಿಂದ ಕುಂಬಳಕಾಯಿ ಎಲೆಕೋಸು ಟೊಮೇಟೋ, ಕ್ಯಾರೆಟ್, ಕಲ್ಲಂಗಡಿ ಖರೀದಿಸಿ ಮನೆಮನೆಗೆ ಹಂಚುತ್ತಿದ್ದಾರೆ
* ಬೆಂಗಳೂರು ಗ್ರಾಮಾಂತರ ಸಂಸದರಾದ ಡಿಕೆ ಸುರೇಶ್ 70 ಟನ್ ಎಲೆಕೋಸನ್ನು ಅನ್ನದಾತದಿಂದ ಖರೀದಿಸಿದ್ದಾರೆ
* ಮಾಲೂರು ಶಾಸಕ ಕೆ.ವೈ ನಂಜೇಗೌಡರು ಟೇಕಲ್ ಕೊಮ್ಮನಹಳ್ಳಿ ಗ್ರಾಮದ ರೈತನಿಂದ ಟನ್ ಗಟ್ಟಲೇ ಕ್ಯಾರೆಟ್ ಖರೀದಿ ಮಾಡಿದ್ದಾರೆ
* ವಿಧಾನಪರಿಷತ್ ಸದಸ್ಯ ಆರ್.ಬಿ ತಿಮ್ಮಾಪುರ ತಮ್ಮ ಕ್ಷೇತ್ರದ ಹಳ್ಳಿಗಳಿಗೆ ತೆರಳಿ ಹಲವು ಟನ್ ತರಕಾರಿ ಕೊಂಡಿದ್ದಾರೆ
* ಭದ್ರಾವತಿಯ ಶಾಸಕ ಬಿ.ಕೆ ಸಂಗಮೇಶ್ ತಮ್ಮ ಕ್ಷೇತ್ರದ ರೈತರಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಹಣ್ಣು ತರಕಾರಿ ಕೊಂಡು ಮನೆಮನೆಗೆ ಹಂಚಿದ್ದಾರೆ
* ಜಮಖಂಡಿ ಶಾಸಕ ಆನಂದ ನ್ಯಾಮಗೌಡ ವಿವಿಧ ತರಕಾರಿಗಳನ್ನು ರೈತರಿಂದ ಖರೀದಿಸಿ 700 ಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸಿದ್ದಾರೆ
* ಕೋಲಾರ ಸಂಸದ ಎಸ್.ಮುನಿಸ್ವಾಮಿ ನೇರವಾಗಿ ಎಪಿಎಂಸಿಯಿಂದ ತರಕಾರಿ ಖರೀದಿಸಿ ದಾನ ಮಾಡಿದ್ದಾರೆ
* ಕುಮುಟಾ ಶಾಸಕ ಗೋಕರ್ಣದಲ್ಲಿ ಅನ್ನದಾತರಿಂದ ತರಕಾರಿ ಕೊಂಡು 8000 ಕುಟುಂಬಗಳಿಗೆ ಹಂಚಿದ್ದಾರೆ
ಡಿಕೆಶಿ ರಾಜ್ಯ ಕಾಂಗ್ರೆಸ್ ಸಾರಥ್ಯ ವಹಿಸಿದ ನಂತರ ಪಕ್ಷದೊಳಗೆ ಹೊಸ ಚೈತನ್ಯ ಕಂಡುಬರುತ್ತಿದೆ. ಅತ್ಯುತ್ತಮ ಸಂಘಟಕರಾದ ಟ್ರಬಲ್ ಶೂಟರ್ ಡಿಕೆಗೆ ತಮ್ಮ ಪಕ್ಷದ ಆಲಸಿ, ದಪ್ಪಚರ್ಮದ ನಾಯಕರ ಕತ್ತಿನ ಪಟ್ಟಿ ಹಿಡಿದು ಕೆಲಸ ಮಾಡಿಸುವುದು ಗೊತ್ತು. ಸದ್ಯಕ್ಕೆ ಈ ಪಟ್ಟಿ ಸಣ್ಣದಿದೆ, ಕಾಂಗ್ರೆಸ್ ನ ವಿಧಾನ ಸಭೆ ವಿಧಾನ ಪರಿಷತ್ ಸದಸ್ಯರ ಸಂಖ್ಯೆ ದೊಡ್ಡದಿದೆ. ಮುಂದಿನದಿನಗಳಲ್ಲಿ ಎಲ್ಲ ಜನಪ್ರತಿನಿಧಿಗಳು ಈ ಹೊಣೆಯನ್ನು ಹೊತ್ತು ನಿಭಾಯಿಸಿ ಕೃಷಿಕರ ನೆರವಿಗೆ ನಿಲ್ಲುತ್ತಾರೆಂಬ ಆಶಾಭಾವನೆ ಇಟ್ಟುಕೊಳ್ಳೋಣ. ಕನಿಷ್ಟ ಎರಡು ಮೂರು ಲಕ್ಷದ ತರಕಾರಿ ಖರಿದಿಸುವುದು ಅವರಿಗೆ ಕಷ್ಟವೇನಲ್ಲ. ಇನ್ನು ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತಿ, ನಗರ ಸಭೆ, ಪಾಲಿಕೆಗಳಂತಹ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ನಾಯಕರೂ ಕೆಲವು ಸಾವಿರದಷ್ಟು ಮೌಲ್ಯದ ಹಣ್ಣು ತರಕಾರಿ ಕೊಂಡು ಹಂಚಬಹುದು. ಡಿಕೆಶಿ ಅತ್ತ ಗಮನಹರಿಸಲಿ.
ಈ ಪಟ್ಟಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತಾರರ ಸಂಖ್ಯೆ ಕಣ್ಣಿಗೆ ಕಾಣಿಸದಂತಿದೆ. ಇದು ಸಂಕಷ್ಟ ಕಾಲ ನಾಯಕರೆನಿಸಿಕೊಂಡವರು ತಮ್ಮ ತಮ್ಮ ಕ್ಷೇತ್ರದ ಅನ್ನದಾರ ಸಂಕಷ್ಟಕ್ಕೆ ಸ್ಪಂದಿಸಬೇಕಿರುವುದು ಎಲ್ಲಾ ಪಕ್ಷಗಳ ನಾಯಕರ ಜವಾಬ್ದಾರಿ.
ತಾಲೂಕು, ಹೋಬಳಿ, ಪ್ರಮುಖ ಪಟ್ಟಣಗಳ ಪ್ರಜ್ಞಾವಂತ ಜನರ ಜವಬ್ದಾರಿಯೂ ಈ ನಿಟ್ಟಿನಲ್ಲಿ ಮಹತ್ವದ್ದಿದೆ. ನಿಮ್ಮ ನಿಮ್ಮ ನಾಯಕರಿಗೆ ಹೀಗೊಂದು ಸೇವೆ ಮಾಡಲು ಆಗ್ರಹಿಸಿ. ಇದು ನಿಮ್ಮ ಸಮಯ ಈಗ ನೀವು ನಿಮಗೆ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಪ್ರಶ್ನಿಸದೇ ಇದ್ದರೆ ನಿಮ್ಮ ಹಕ್ಕುಗಳನ್ನು ಕಳೆದುಕೊಂಡಂತೆ.
ಲಾಸ್ಟ್ ವರ್ಡ್: ಉದಯವಾಣಿಯ ರೈತಸೇತು ಕಾಲಂ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳು ರೈತರ ಸಂಕಷ್ಟದತ್ತ ಬೆಳಕು ಚೆಲ್ಲಿದ್ದರ ಪರಿಣಾಮವಿದು. ರೈತಬಂಧು ನಮ್ಮ ಮಾಧ್ಯಮದ ಕಳಕಳಿಯನ್ನು ನಾವಿಲ್ಲಿ ಸ್ಮರಿಸಬೇಕು.
– ವಿಭಾ
***








