ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕಿನ ಕೇಂದ್ರವಾದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಒಬ್ಬರು ಅದಾಗಲೇ ಈ ವೈರಸ್ ಗೆ ಬಲಿಯಾಗಿದ್ದಾರೆ.
ಚೀನಾದ ಶಂಡಾಂಗ್ ಪ್ರಾಂತ್ಯದಲ್ಲಿ ಹ್ಯಾಂಟ ವೈರಸ್ ಕಾಣಿಸಿಕೊಂಡಿದ್ದು, ಸೋಮವಾರ ವ್ಯಕ್ತಿಯೊಬ್ಬರು ಕೆಲಸಕ್ಕಾಗಿ ಶಂಡಾಂಗ್ ಪ್ರಾಂತ್ಯಕ್ಕೆ ಬಸ್ನಲ್ಲಿ ತೆರಳುತ್ತಿದ್ದಾಗ ಈ ವೈರಸ್ ಗೆ ಬಲಿಯಾಗಿದ್ದಾರೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ ಅಲ್ಲದೇ ಸುಮಾರು 32 ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ ಎಂದು ತಿಳಿಸಿದೆ.
ಈಗಾಗಲೇ ಕೊರೊನಾ ಹೊಡೆತದಿಂದ ಜಗತ್ತೇ ಬಸವಳಿದಿದ್ದು, ಹೊಸ ವೈರಸ್, ಮತ್ತೊಂದು ಕೋವಿಡ್19 ಸೋಂಕುನಂತಾಗಲಿದೆಯಾ ಎಂಬ ಭಯ ಜನರಲ್ಲಿ ಆವರಿಸಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಂಟ್ ವೈರಸ್ ಟ್ರೆಂಡ್ನಲ್ಲಿದೆ.
ಹ್ಯಾಂಟ್ ವೈರಾಣು ತಗುಲಿದರೆ ಆರಂಭದಲ್ಲಿ ಜ್ವರ, ತಲೆನೋವು, ಸ್ನಾಯುಗಳಲ್ಲಿ ನೋವು, ಹೊಟ್ಟೆನೋವು, ತಲೆತಿರುಗುವಿಕೆ, ಶೀತ ಮತ್ತು ವಾಕರಿಕೆ, ವಾಂತಿ, ಅತಿಸಾರದಂಥ ತೊಂದರೆಗಳು ಕಾಣಿಸಿಕೊಂಡು, ನಂತರದ ದಿನಗಳಲ್ಲಿ ಶ್ವಾಸಕೋಶಗಳಿಗೆ ನೀರು ತುಂಬಿಕೊಂಡು, ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಈ ವೇಳೆ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ ಎಂದು ಮಾಹಿತಿಗಳು ತಿಳಿಸಿದ್ದು, ಹ್ಯಾಂಟ್ ವೈರಾಣು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ದಂಶಕಗಳು ಅಂದರೆ ಇಲಿ ಜಾತಿಯ ಪ್ರಾಣಿಗಳ ಮಲ, ಮೂತ್ರ, ಲಾಲಾರಸ ಸ್ಪರ್ಶಿಸಿ ನಂತರ ಕಣ್ಣು, ಮೂಗು, ಬಾಯಿ ಸ್ಪರ್ಶಿಸಿದರೆ ಆ ವ್ಯಕ್ತಿಗಳಿಗೆ ಈ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ಮಾಹಿತಿಗಳು ತಿಳಿಸಿವೆ.