ಮಾನವ ಕಳ್ಳಸಾಗಣೆ ಮಾಡುತ್ತಿದ್ದ 6 ಜನರನ್ನು ಬಂಧಿಸಿದ NIA – Saaksha Tv
ನವದೆಹಲಿ : ನಕಲಿ ದಾಖಲೆಗಳನ್ನು ಸೃಷ್ಟಿಸಿ ರೋಹಿಂಗ್ಯಾ ಮುಸ್ಲಿಮರಿಗೆ ಭಾರತವನ್ನು ಪ್ರವೇಶಿಸಲು ಸಹಾಯ ಮಾಡುತ್ತಿದ್ದ ಆರು ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಕುಂಕುಮ್ ಅಹ್ಮದ್ ಚೌಧರಿ ಅಲಿಯಾಸ್ ಕೆಕೆ ಅಹಮದ್ ಚೌಧರಿ ಅಲಿಯಾಸ್ ಅಸಿಕುಲ್ ಅಹ್ಮದ್ ಎಂಬಾತ ಈ ಗುಂಪಿನ ನಾಯಕನಾಗಿದ್ದು, ಈತನ ಜೊತೆಗೆ ಸಹಲಂ ಲಸ್ಕರ್, ಅಹಿಯಾ ಅಹ್ಮದ್ ಬಾಪನ್ ಅಹ್ಮದ್ ಚೌಧರಿ ಮತ್ತು ಜಮಾಲುದ್ದೀನ್ ಅಹ್ಮದ್ ಚೌಧರಿ ಬಂಧಿತ ಆರೋಪಿಗಳು.
ರೋಹಿಂಗ್ಯಾ ಮುಸ್ಲಿಮರನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಭಾರತದ ಭೂಪ್ರದೇಶಕ್ಕೆ ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದರು. ಈ ಕುರಿತಂತೆ ಡಿಸೆಂಬರ್ನಲ್ಲಿ ಮಾಹಿತಿ ಪಡೆದ ಎನ್ಐಎ ಅಧಿಕಾರಿಗಳು ಐಪಿಸಿ ಸೆಕ್ಷನ್ 370 ಮತ್ತು 370(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಈ ದಂಧೆಯ ಮಾಸ್ಟರ್ ಮೈಂಡ್ ಚೌಧರಿ ಬೆಂಗಳೂರಿನಿಂದ ಮಾನವಕಳ್ಳಸಾಗಣೆ ಜಾಲವನ್ನು ನಡೆಸುತ್ತಿದ್ದ ಎಂದು ಎನ್ಐಎ ಹೇಳಿದೆ. ಈ ದಂಧೆ ನಡೆಸುತ್ತಿದ್ದ ಇತರರು ದೇಶದ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಸ್ಸೋಂ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ದೇಶದ ಇತರ ಭಾಗಗಳ ಗಡಿ ಪ್ರದೇಶಗಳಲ್ಲಿ ಮಾನವ ಕಳ್ಳಸಾಗಣೆ ಜಾಲ ಸಕ್ರಿಯವಾಗಿತ್ತು. ಈ ಕುರಿತಂತೆ ಎನ್ಐಎ ಅಧಿಕಾರಿಗಳು ಕರ್ನಾಟಕ, ಅಸ್ಸೋಂ, ಮೇಘಾಲಯದ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.