ʼತ್ರಿವರ್ಣʼದಲ್ಲಿ ಕಂಗೊಳಿಸಿದ ನಯಾಗರ ಫಾಲ್ಸ್ – ಭಾರತದ ಪರ ಕೆನಡಾ..!
ಕೆನಡಾ : ಕೊರೊನಾ 2 ನೇ ಅಲೆಯ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಸದ್ಯದ ಪರಿಸ್ಥಿತಿ ಅತ್ಯಂತ ವಿಷಮವಾಗಿದೆ. ಹೆಮ್ಮಾರಿ ಕೊರೊನಾಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ತಿದ್ಧಾರೆ. ಇತ್ತ ಬೆಡ್ ಕೊರತೆ , ಆಕ್ಸಿಜನ್ ಕೊರತೆಯಿಂದ ಜನ ಸಾಯುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೂ ದಿಕ್ಕು ತೋಚದಂತಾಗಿದೆ.
ಈ ನಡುವೆ ಮಿತ್ರ ರಾಷ್ಟ್ರಗಳು ಸೇರಿ ಅನೇಕ ದೇಶಗಳು ಭಾರತದ ಬೆಂಬಲಕ್ಕೆ ನಿಂತಿವೆ. ಭಾರತಕ್ಕೆ ಬೆಂಬಲ ಸೂಚಿಸುತ್ತಿವೆ. ಭಾರತದ ಪರ ನಾವಿದ್ದೇವೆ ಎಂದು ಇಡೀ ವಿಶ್ವಕ್ಕೆ ತೋರಿಸುತ್ತಿವೆ. ಅದ್ರಂತೆ ಕೆನಡಾ ಸರ್ಕಾರವೂ ಭಾರತಕ್ಕೆ ಭಾರತೀಯರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಇತ್ತೀಚೆಗೆ ಅಂದ್ರೆ ಬುಧವಾರ ನಯಾಗರ ಜಲಪಾತದಲ್ಲಿ ತ್ರಿವರ್ಣ ಧ್ವಜದ ಬಣ್ಣಗಳನ್ನ ಬೆಳಗುವುದರ ಮೂಲಕ ಭಾರತಕ್ಕೆ ಬೆಂಬಲ ಸೂಚಿಸಿದೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿದ್ದ ನಯಾಗರ ಪಾರ್ಕ್ಸ್, ‘ಭಾರತವು ಕೋವಿಡ್ 19ನಿಂದಾಗಿ ಸಾಕಷ್ಟು ಜೀವಗಳನ್ನ ಕಳೆದುಕೊಳ್ಳುತ್ತಿದೆ. ಭಾರತದ ಜೊತೆಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ನಯಾಗರ ಜಲಪಾತವು ಇಂದು ( ಬುಧವಾರ) ರಾತ್ರಿ 9.30 ರಿಂದ 10 ಗಂಟೆಯವರೆಗೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ದೀಪಗಳಿಂದ ಮಿನುಗಲಿದೆ ಎಂದು ಟ್ವೀಟ್ ಮಾಡಿತ್ತು..
ಈ ಮೂಲಕ ಒಂದೇ ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ನಯಾಗರ ಜಲಪಾತವು ತ್ರಿವರ್ಣ ಧ್ವಜದಿಂದ ಕಂಗೊಳಿಸಿದೆ. ಈ ಹಿಂದೆ ದೇಶದ 74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಯಾಗರ ಜಲಪಾತವು ತ್ರಿವರ್ಣ ಧ್ವಜದಿಂದ ಮಿನುಗಿತ್ತು. ಕೊರೊನಾ ಸಂಕಷ್ಟದಲ್ಲಿರುವ ಭಾರತಕ್ಕೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ನಯಾಗರ ಮತ್ತೊಮ್ಮೆ ತ್ರಿವರ್ಣ ಧ್ವಜದಲ್ಲಿ ಕಂಗೊಳಿಸಿತ್ತು..
ಕೆನಡಾದ ಈ ಕಾರ್ಯಕ್ಕೆ ಭಾರತೀಯರು ಟ್ವಿಟರ್ ನಲ್ಲಿ ಧನ್ಯವಾದಗಳ ಸುರಿಮಳೆ ಸುರಿಸಿದ್ದಾರೆ. ಇತ್ತೀಚೆಗೆ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೂ ಭಾರತದ ತ್ರಿವರ್ಣ ಧ್ವಜ ರಾರಾಜಿಸಿತ್ತು. ಈ ಮೂಲಕ UAE ಸಹ ಭಾರತಕ್ಕೆ ಬೆಂಬಲ ನೀಡಿತ್ತು. ಇನ್ನೂ ಅನೇಕ ದೇಶಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವನ್ನ ಬೆಂಬಲಿಸುತ್ತಿವೆ.