ಬೆಂಗಳೂರು : ಕೊರೊನಾ ಲಾಕ್ ಡೌನ್ ವೇಳೆ ನಡೆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮದುವೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್ ಗೆ ಇಂದು ವಿವರಣೆ ನೀಡಿದೆ.
ಕಳೆದ ತಿಂಗಳು ನಡೆದ ನಟ ನಿಖಿಲ್ ಕುಮಾರಸ್ವಾಮಿ ಮದುವೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂದು ವಕೀಲ ಜಿ.ಆರ್. ಮೋಹನ್ ಅರ್ಜಿ ಹಾಕಿದ್ದರು. ಈ ಸಂಬಂಧ ಹೈಕೋರ್ಟ್, ರಾಜ್ಯ ಸರ್ಕಾರದ ವಿವರಣೆ ಕೇಳಿತ್ತು. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಅರ್ಜಿಯ ವಿಚಾರಣೆ ನಡೆಸಿದ್ದು, ಸರ್ಕಾರಿ ವಕೀಲ ವಿಕ್ರಮ್ ಹುಯಿಲ್ಗೋಳ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
“ಏಪ್ರಿಲ್ 17ರಂದು ಕೇತಗಾನಹಳ್ಳಿಯ ಮನೆಯಲ್ಲಿ ನಿಖಿಲ್ ಹಾಗೂ ರೇವತಿಯ ಮದುವೆ ನಡೆಸಲು ರಾಮನಗರ ಡಿಸಿ ಅನುಮತಿ ನೀಡಿದ್ದರು. ಮದುವೆಯಲ್ಲಿ 80-95 ಕುಟುಂಬಸ್ಥರು ಭಾಗವಹಿಸಿದ್ದರು. ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಆದ್ರೆ ಮಾಂಗಲ್ಯ ಧಾರಣೆ ವೇಳೆ ಮಾತ್ರ ಕುಟುಂಬಸ್ಥರು ಮಾಸ್ಕ್ ಧರಿಸಿಲ್ಲದಿರುವುದು ಕಂಡುಬಂದಿದೆ. ಬೆಳಗ್ಗೆ 8 ರಿಂದ 10ಗಂಟೆವರೆಗೆ ಮದುವೆ ಸಮಾರಂಭ ನಡೆದಿದೆ” ಎಂದು ವಿಕ್ರಮ್ ಹುಯಿಲ್ಗೋಳ್ ಅವರು ವಿವರಣೆ ನೀಡಿದ್ದಾರೆ.