2020ರ ಉನ್ನತ ಲೋಕೋಪಕಾರಿಗಳ ಸಾಲಿನಲ್ಲಿ ಸ್ಥಾನ ಪಡೆದ ನೀತಾ ಅಂಬಾನಿ
ಮುಂಬೈ, ಜೂನ್ 22: 2020ರ ಉನ್ನತ ಲೋಕೋಪಕಾರಿಗಳ ಸಾಲಿನಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿ ಸ್ಥಾನ ಪಡೆದಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರ ಜೀವವನ್ನು ಉಳಿಸಲು, ಅವರ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಒದಗಿಸಿ ನೆರವಾಗುತ್ತಿರುವ 2020ರ ಉನ್ನತ ಲೋಕೋಪಕಾರಿಗಳ ಪಟ್ಟಿಯನ್ನು ಅಮೆರಿಕದ ನಿಯತಕಾಲಿಯಾದ ಟೌನ್ & ಕಂಟ್ರಿ ಪ್ರಕಟಿಸಿದೆ. ಬಡಜನರಿಗೆ ಮತ್ತು ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ರಿಲಯನ್ಸ್ ಫೌಂಡೇಶನ್ ಮತ್ತು ನೀತಾ ಅಂಬಾನಿ ಅವರ ನೆರವಿನ ಕೊಡುಗೆಗೆ ಯುಎಸ್‌ಎ ಟೌನ್ ಮತ್ತು ಕಂಟ್ರಿ ಮ್ಯಾಗಜೀನ್ ಗೌರವ ಸಲ್ಲಿಸಿದೆ.
2020ರ ಉನ್ನತ ಲೋಕೋಪಕಾರಿಗಳ ಪಟ್ಟಿಯಲ್ಲಿ ನೀತಾ ಅಂಬಾನಿ ಜೊತೆಗೆ ಟಿಮ್ ಕುಕ್, ಓಪ್ರಾ ವಿನ್ಫ್ರೇ, ಲಾರೆನ್ ಪೊವೆಲ್ ಜಾಬ್ಸ್, ಲಾಡರ್ ಫ್ಯಾಮಿಲಿ, ಡೊನಾಟೆಲ್ಲಾ ವರ್ಸೇಸ್, ಮೈಕೆಲ್ ಬ್ಲೂಮ್ಬರ್ಗ್, ಲಿಯೊನಾರ್ಡೊ ಡಿ ಕ್ಯಾಪ್ರಿಯೋ ಮುಂತಾದವರ ಹೆಸರನ್ನು ಕಾಣಬಹುದಾಗಿದೆ.

ರಿಲಯನ್ಸ್ ಫೌಂಡೇಶನ್ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ನೀತಾ ಅಂಬಾನಿ ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಬಡಜನರಿಗೆ ಮತ್ತು ಕಾರ್ಮಿಕರಿಗೆ ಆಹಾರವನ್ನು ಒದಗಿಸುವ ಜೊತೆಗೆ ಕೊರೊನಾದಿಂದ ರಕ್ಷಿಸಲು ಮಾಸ್ಕ್ ಅನ್ನು ಕೂಡ ವಿವರಿಸಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಸೋಂಕಿತ ರೋಗಿಗಳಿಗಾಗಿ ಭಾರತದ ಮೊದಲ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. ಕೊರೊನಾ ವಿರುದ್ಧ ಹೋರಾಡಲು ತುರ್ತು ನಿಧಿಗೆ 72 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದಾರೆ.

ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ರಿಲಯನ್ಸ್ ಫೌಂಡೇಶನ್ ಮುಂಬೈನಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ನಿರ್ಮಿಸಿದೆ. ಅಷ್ಟೇ ಅಲ್ಲ ’ಅನ್ನ ಸೇವಾ’ ಎಂಬ ರಾಷ್ಟ್ರವ್ಯಾಪಿ ಆಹಾರ ಸೇವೆಯನ್ನು ಪ್ರಾರಂಭಿಸಿದ್ದು, ಇದರ ಮೂಲಕ ಇಲ್ಲಿಯವರೆಗೆ 50 ಮಿಲಿಯನ್ ಆಹಾರಗಳನ್ನು ಪೂರೈಸಿದೆ ಮತ್ತು ಇದು ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಅನ್ನದಾನದ ಕಾರ್ಯಕ್ರಮವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಸ್ಕ್ ಮತ್ತು ಪಿಪಿಇಗಳ ತಯಾರಿಕೆಯನ್ನು ಸಹ ರಿಲಯನ್ಸ್ ಇಂಡಸ್ಟ್ರೀಸ್ ಪ್ರಾರಂಭಿಸಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಈ ನಿರ್ಣಾಯಕ ವಸ್ತುಗಳ ಉತ್ಪಾದನೆಯು ದೇಶವು ಸ್ವಾವಲಂಬನೆ ಸಾಧಿಸಲು ಕಾರಣವಾಗಿದೆ.








