ಅಡಿಕೆಯಿಂದ ಚಹಾ ತಯಾರಿಸಿದ ಸಂಶೋಧಕನಿಂದ ಈಗ ಅಡಿಕೆ ಶ್ಯಾಂಪು ಆವಿಷ್ಕಾರ; ಅರೇಕಾ ಟೀ ನಿವೇದನ್ ನಿಂಪೆ ಜೊತೆ ಸಾಕ್ಷಾ ಟಿವಿಯ ಸಂಕ್ಷಿಪ್ತ ಸಂದರ್ಶನ: Saakshatv interview Nivedan
ಅರೆಕಾ ಟೀ – ಹಲವಾರು ಅಡಿಕೆ ಬೆಳೆಗಾರರಿಗೆ ಹೊಸ ಜೀವನವನ್ನು ನೀಡಿದ ಉತ್ಪನ್ನ. – Saakshatv interview Nivedan

ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧದ ಭೀತಿಯಿಂದ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಅರೆಕಾ ಚಹಾ ಎಂಬ ಹೊಸ ಉತ್ಪನ್ನ ಕರ್ನಾಟಕದ ಅಡಿಕೆ ರೈತರ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿತ್ತು. ಇದರ ರೂವಾರಿ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ನಿವಾಸಿ, ಅರೆಕಾ ಟೀ ಸಂಸ್ಥಾಪಕ ಮತ್ತು ಸಿಇಒ ನಿವೇದನ್ ನೆಂಪೆ.
ಇವರು ಅಡಕೆಯೊಳಗಿನ ಅಗಾಧ ಔಷಧೀಯ ಗುಣಗಳನ್ನು ಪ್ರಯೋಗಗಳ ಮೂಲಕ ಸಾಬೀತುಪಡಿಸಿ ಅರೆಕಾ ಚಹಾ ಎಂಬ ಹೊಸ ಉತ್ಪನ್ನವನ್ನು ಪರಿಚಯಿಸಿದರು. ಶಿವಮೊಗ್ಗದ ನ್ಯಾಷನಲ್ ಕಾಲೇಜ್ ಆಫ್ ಫಾರ್ಮಸಿಯಿಂದ ಬ್ಯಾಚ್ಯುಲರ್ ಆಫ್ ಫಾರ್ಮಸಿ ಪದವಿ ಪಡೆದಿರುವ ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ನಿವೇದನ್ ನೆಂಪೆ, ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಉತ್ಪಾದನೆ ಮತ್ತು ನಿರ್ವಹಣಾ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ.
ಅರೆಕಾ ಟೀ ಸಂಸ್ಥಾಪಕ ಮತ್ತು ಸಿಇಒ ನಿವೇದನ್ ನೆಂಪೆ ಬೆಂಗಳೂರು ಮತ್ತು ಉಡುಪಿಯಲ್ಲಿ ಕೃಷಿಗೆ ಸಂಬಂಧಿಸಿದ ಮೌಲ್ಯವರ್ಧಿತ ಕಂಪನಿ ಸ್ಥಾಪಿಸಿ ಅಲ್ಲಿ ರೈತರು ಬೆಳೆಯುವ ಕೃಷಿ ಉತ್ಪನ್ನಗಳ ಮೇಲೆ ಸಂಶೋಧನೆ ನಡೆಸಿ ಅದಕ್ಕೆ ಹೊಸ ಹೊಸ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದ್ದಾರೆ.
ತಾನು ಕ್ರಮಿಸಬೇಕಾದ ದಾರಿಯನ್ನು ಈಗಾಗಲೇ ಗುರುತಿಸಿ ಕೊಂಡಿರುವ ಯುವ ಸಂಶೋಧಕ ನಿವೇದನ್ ನೆಂಪೆ ಇದೀಗ ಅಡಿಕೆಯಿಂದ ಶಾಂಪೂ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದಾರೆ. ‘ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್’ ಮತ್ತು ‘2015 ರ ನವೀನ ಉತ್ಪನ್ನ’ ಪ್ರಶಸ್ತಿಗಳಿಗೆ ಭಾಜನರಾಗಿರುವ ನಿವೇದನ್ ನೆಂಪೆ ಸಾಕ್ಷಾ ಟಿವಿ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಸಂದರ್ಶನದ ಆಯ್ದ ಭಾಗ ಇಂತಿದೆ.

ಸಾಕ್ಷಾ ಟಿವಿ : ಸಾಕ್ಷಾ ಟಿವಿ ವತಿಯಿಂದ ನಿಮಗೆ ಅಭಿನಂದನೆಗಳು. ನಿಮ್ಮ ಅಡಿಕೆ ಮೇಲಿನ ಸಂಶೋಧನೆ ಅಡಿಕೆ ಬೆಳಗಾರರಲ್ಲಿ ಹೊಸ ಬೆಳಕು ಮೂಡಿಸಿದೆ. ಈಗಾಗಲೇ ಅಡಿಕೆಯಿಂದ ತಯಾರಿಸಿದ ಅರೇಕಾ ಟೀ ಮನೆ ಮಾತಾಗಿದೆ. ಇದರ ಬಗ್ಗೆ ನಮಗೆ ತಿಳಿಸಿಕೊಡಿ.
ನಿವೇದನ್ ನೆಂಪೆ : ಅರೆಕಾ ಟೀ ಈಗಾಗಲೇ ಸಾಬೀತಾಗಿರುವ ಉತ್ಪನ್ನವಾಗಿದೆ. ಇದನ್ನು 2015 ರಲ್ಲಿ ನಾವು ಬಿಡುಗಡೆ ಮಾಡಿದೆವು. ಅರೆಕಾ ಚಹಾದ ಕ್ಲಿನಿಕಲ್ ಪರೀಕ್ಷೆಗಳು ಮಧುಮೇಹ ರೋಗಿಗಳಿಗೆ ಪ್ರಯೋಜನವನ್ನು ಸಾಬೀತು ಮಾಡಿದೆ ಮತ್ತು ಅದು ಜಾಗತಿಕವಾಗಿ ಜನಪ್ರಿಯವಾಗಿದೆ.
ಸಾಕ್ಷಾ ಟಿವಿ : ಅರೇಕಾ ಟೀ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿತ್ತು?
ನಿವೇದನ್ ನೆಂಪೆ : ಅರೇಕಾ ಟೀ ಬಿಡುಗಡೆ ಮಾಡಿದ ಬಳಿಕ ನಾವು ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದೆವು ಮತ್ತು ಅದರಂತೆ ಮಾರ್ಪಾಡು ಮಾಡುತ್ತಾ ಬಂದೆವು. ಐದು ವರ್ಷಗಳಲ್ಲಿ ನಾವು ಉತ್ಪನ್ನವನ್ನು ಮತ್ತಷ್ಟು ಮಾರ್ಪಡಿಸಿದ್ದು, ಐದು ಪ್ಲೇವರ್ ಅನ್ನು ಸೇರಿಸಿದ್ದೇವೆ. ಹೀಗಾಗಿ ಇದು ಅತ್ಯಂತ ಯಶಸ್ವಿಯಾಗಲು ಕಾರಣವಾಯಿತು.
ಸಾಕ್ಷಾ ಟಿವಿ : ಹಳ್ಳಿಯ ಮೂಲೆ ಮೂಲೆಗಳನ್ನು ಇದು ತಲುಪಿದೆಯಾ ?
ನಿವೇದನ್ ನೆಂಪೆ : ನಗರ ಪ್ರದೇಶಗಳಲ್ಲಿ ತಲುಪಿದಷ್ಟು ಸುಲಭವಾಗಿ ಹಳ್ಳಿಗಳಲ್ಲಿ ತಲುಪಲು ಸಾಧ್ಯವಾಗಲಿಲ್ಲ. ಹಳ್ಳಿಯ ಜನರಲ್ಲಿ ನಮ್ಮ ಉತ್ಪನ್ನದ ಬಗ್ಗೆ ಅರಿವು ಮೂಡಿಸುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಹಾಗಾಗಿ ಹಳ್ಳಿಯ ಮೂಲೆ ಮೂಲೆ ತಲುಪಬೇಕು ಎಂಬ ಕಾರಣದಿಂದ ಈಗ ಶಾಂಪೂ ಸ್ಯಾಚೆಟ್ ಅನ್ನು 2 ರೂ ಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ.
ಸಾಕ್ಷಾ ಟಿವಿ : ನಿಮಗೆ ಅಡಿಕೆಯಿಂದ ಈ ರೀತಿಯ ಉತ್ಪನ್ನಗಳನ್ನು ಮಾಡುವ ಆಲೋಚನೆ ಬಂದದ್ದು ಹೇಗೆ ?
ನಿವೇದನ್ ನೆಂಪೆ : ಅಡಿಕೆಯಲ್ಲಿ ಯಾವಾಗಲೂ ಒಂದಲ್ಲ ಒಂದು ಸಮಸ್ಯೆ ಇದ್ದೆ ಇರುತ್ತದೆ. ಅಡಿಕೆ ಕ್ಯಾನ್ಸರ್ ಕಾರಕ ಮತ್ತು ಅದನ್ನು ನಿಷೇಧಿಸಬೇಕು ಇತ್ಯಾದಿ ಸಮಸ್ಯೆಗಳು ಆಗಾಗ್ಗೆ ಕೇಳಿಬರುತ್ತದೆ. ಹೀಗಾಗಿ ಅಡಿಕೆ ಬೆಳೆಗಾರರ ಆತಂಕವನ್ನು ಪರಿಹರಿಸಲು, ಅಡಿಕೆ ಪರ ನಿಂತೆ. ಅಡಿಕೆಯಲ್ಲಿನ ಗುಣಗಳ ಮೇಲೆ ಸಂಶೋಧನೆ ನಡೆಸಿ ಔಷಧೀಯ ಗುಣಗಳನ್ನು ಸಾಬೀತು ಪಡಿಸಿದೆ.
ಸಾಕ್ಷಾ ಟಿವಿ : ಅಡಿಕೆಯಲ್ಲಿನ ನಿಮ್ಮ ಔಷಧೀಯ ಗುಣಗಳ ಸಂಶೋಧನಾ ವರದಿಯಿಂದ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆದಿದೆಯಾ ?
ನಿವೇದನ್ ನೆಂಪೆ : ಕೇಂದ್ರಕ್ಕೆ ಮತ್ತು ಜಾಹೀರಾತು ಅಥೋರಿಟಿಗೆ ನಾವು ವರದಿ ಕೊಟ್ಟಿದ್ದೇವೆ. ಆದರೆ ಇದಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ನಮ್ಮಲ್ಲಿ ಅಡಿಕೆಯಲ್ಲಿನ ಔಷಧೀಯ ಗುಣಗಳನ್ನು ಸಾಬೀತು ಮಾಡಲು ಬೇಕಾದ ಎಲ್ಲಾ ವರದಿಗಳಿವೆ.

ಸಾಕ್ಷಾ ಟಿವಿ : ಈಗಾಗಲೇ ಹಲವಾರು ಕಂಪನಿಗಳ ಶಾಂಪೂ ಇದೆ. ಅಡಿಕೆಯಿಂದ ತಯಾರಿಸಿದ ಶಾಂಪೂ ಅದಕ್ಕಿಂತ ಹೇಗೆ ಭಿನ್ನ?
ನಿವೇದನ್ ನೆಂಪೆ : ಮಾರುಕಟ್ಟೆಯಲ್ಲಿ ಇರುವ ಶಾಂಪೂ ಕೂದಲಿಗಷ್ಟೆ ಉಪಯೋಗಿಸಬಹುದು. ನಮ್ಮ ಅಡಿಕೆ ಶಾಂಪೂ ತಲೆಗೂದಲು ಮತ್ತು ಮೈ ಗೆ ಉಪಯೋಗಿಸಬಹುದು.
ಅಡಿಕೆಯಲ್ಲಿ ಆಂಟಿ ಏಜೆಂಗ್ ಇದ್ದು, ಇದು ದೇಹದಲ್ಲಿನ ಸುಕ್ಕನ್ನು ಕಡಿಮೆ ಮಾಡುತ್ತದೆ. ಗ್ಯಾಲಿಕ್ ಆ್ಯಸಿಡ್ ಎಂಬ ಆ್ಯಂಟಿ ಫಂಗಲ್ ಇದ್ದು, ಇದು ಜೆಮ್ ಗಳನ್ನು ಸಾಯಿಸುತ್ತದೆ. ಹಾಗಾಗಿ ಅಡಿಕೆಯಲ್ಲಿನ ಔಷಧೀಯ ಗುಣಗಳನ್ನು ಬಳಸಿಕೊಂಡು ಈ ಶಾಂಪೂ ಅನ್ನು ತಯಾರಿಸಲಾಗುತ್ತಿದೆ.
ಇದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಉತ್ತಮವಾಗಿದೆ. ಚಿಕ್ಕ ಮಕ್ಕಳಿನಿಂದ ಹಿಡಿದು ವಯೋವೃದ್ಧರವರೆಗೆ ಗಂಡು ಹೆಣ್ಣು ಭೇದವಿಲ್ಲದೆ ಯಾರೂ ಬೇಕಾದರೂ ಇದನ್ನು ಉಪಯೋಗಿಸಬಹುದು.
ಸಾಕ್ಷಾ ಟಿವಿ : ಅಡಿಕೆ ಅಲ್ಲದೇ ಬೇರೆ ಕೃಷಿ ಉತ್ಪನ್ನಗಳಿಂದ ಏನಾದರೂ ಹೊಸತನ್ನು ಸಂಶೋಧಿಸಿದ್ದೀರಾ?
ನಿವೇದನ್ ನೆಂಪೆ : ಅಡಿಕೆ ಮಾತ್ರವಲ್ಲದೆ ನಾವು ಕಬ್ಬು, ಅಕ್ಕಿ, ಕೊಬ್ಬರಿ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳಿಂದ ಹೊಸ ಉತ್ಪನ್ನಗಳನ್ನು ಕಂಡು ಹಿಡಿದಿದ್ದೇವೆ. ಆದರೆ ಅಡಿಕೆ ಬೆಳೆಯಲ್ಲಿ ಹೆಚ್ಚು ಸಮಸ್ಯೆಗಳು ಇರುವ ಕಾರಣ ಅದಕ್ಕೆ ಹೆಚ್ಚಿನ ಪ್ರಚಾರ ನೀಡಿದ್ದೇವೆ.
ಸಾಕ್ಷಾ ಟಿವಿ : ಅಡಿಕೆ ಟೀ ಮತ್ತು ಅಡಿಕೆ ಶಾಂಪೂ ಇದಕ್ಕೆ ಬಳಕೆಯಾಗುವ ಅಡಿಕೆ ಯಾವುದು?
ನಿವೇದನ್ ನೆಂಪೆ : ಶಿವಮೊಗ್ಗ ಅಡಿಕೆ ಅರೆಕಾ ಟೀ ನಲ್ಲಿ ಬಳಕೆಯಾದರೆ, ಮಂಗಳೂರು ಕಡೆಯ ಅಡಿಕೆ ಶಾಂಪೂ ನಲ್ಲಿ ಬಳಕೆಯಾಗುತ್ತದೆ.
ಸಾಕ್ಷಾ ಟಿವಿ: ಅಡಿಕೆಗೆ ಬಳಸುವ ಮೈಲುತುತ್ತು, ಸ್ಪ್ರೇ ಇತ್ಯಾದಿ ರಾಸಾಯನಿಕಗಳಿಂದ ನಿಮ್ಮ ಉತ್ಪನ್ನಗಳಿಗೆ ತೊಂದರೆ ಇದೆಯಾ?
ನಿವೇದನ್ ನೆಂಪೆ : ಮೈಲುತುತ್ತು ಇತ್ಯಾದಿ ಅಡಿಕೆ ಸಿಪ್ಪೆಯ ಮೇಲೆ ಬಳಸುವ ರಾಸಾಯನಿಕಗಳಿಂದ ತೊಂದರೆ ಇಲ್ಲ ಆದರೆ ಅಡಿಕೆಯನ್ನು ಸಂರಕ್ಷಿಸಲು ಬಳಸಲು ರಾಸಾಯನಿಕಗಳಿಂದ ತೊಂದರೆ ಇದೆ.
ಸಾಕ್ಷಾ ಟಿವಿ : ರೈತರು ತಾವು ಬೆಳೆಸಿದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಆತ್ಮಹತ್ಯೆ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ ಸಲಹೆಯೇನು?
ನಿವೇದನ್ ನೆಂಪೆ : ಬೆಳೆದ ಕೃಷಿ ಉತ್ಪನ್ನಗಳನ್ನು ಹಾಗೆ ಸಿಕ್ಕಿದ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ. ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಅದರಿಂದ ಹೊಸತನ್ನು ಮಾಡಿ ಮಾರಿದರೆ ಆಗ ಒಂದನ್ನೇ ಅವಲಂಬಿಸಬೇಕಾಗಿಲ್ಲ. ಆದರಿಂದ ವಿದ್ಯಾವಂತರು ಕೃಷಿಯತ್ತ ಗಮನ ಹರಿಸಬೇಕಾಗಿದೆ.

ಸಾಕ್ಷಾ ಟಿವಿ : ಕೊರೋನಾ ಹಿನ್ನೆಲೆಯಲ್ಲಿ ಪಟ್ಟಣ ಸೇರಿದ ವಿದ್ಯಾವಂತರು ಊರಿಗೆ ಮರಳಿದ್ದಾರೆ. ಹಿರಿಯರ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ ಸಲಹೆ?
ನಿವೇದನ್ ನೆಂಪೆ : ಕೃಷಿ ಉತ್ಪನ್ನಗಳನ್ನು ಬಳಸಿಕೊಂಡು ಅದರಿಂದ ಹೊಸತನ್ನು ಮಾಡಿ ಮಾರಿ. ಈಗ ಭತ್ತ ಬೆಳೆಸುತ್ತೇವೆ. ಹಾಗೆ ಅದನ್ನು ಮಾರುತ್ತೇವೆ. ಅದರ ಬದಲಾಗಿ ಅದರಿಂದ ಇನ್ನೊಂದು ಹೊಸ ಉತ್ಪನ್ನವನ್ನು ಸೃಷ್ಟಿಸಿ. ಹೀಗೆ ಮಾಡಿ ಮಾರಿದರೆ ಕೃಷಿಯಷ್ಟು ಲಾಭದಾಯಕ ಬೇರೆ ಯಾವುದು ಇರಲು ಸಾಧ್ಯವಿಲ್ಲ.
ಸಾಕ್ಷಾ ಟಿವಿ : ನಿಮ್ಮ ಸಾಧನೆಯ ಗಾಥೆ ಇಂದಿನ ಯುವ ಜನಾಂಗಕ್ಕೆ ಮಾದರಿ. ನೀವು ಕ್ರಮಿಸಬೇಕಾದ ಪಥದ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮ ಯಶಸ್ಸಿನ ಹಾದಿ ಸುಗಮವಾಗಲಿ ಎಂದು ಸಾಕ್ಷಾ ಟಿವಿ ಹಾರೈಸುತ್ತದೆ.. ಧನ್ಯವಾದಗಳು
ಸಂದರ್ಶನ ಮತ್ತು ವರದಿ:- ಶ್ವೇತಾ
***
Saakshatv interview Nivedan
ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮದಿನ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








