ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಪ್ತ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮತ್ತೆ ಮೂರನೇ ಬಾರಿಗೆ ಹೋಂಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಈ ಬಗ್ಗೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದು, ನಾನು ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಪ್ತ ಸಹಾಯಕನಿಗೆ ಕೊರೋನಾ ಸೋಂಕು ತಗುಲಿದ್ದು ಮತ್ತೊಮ್ಮೆ ನಾನು ಕ್ವಾರಂಟೈನ್ ಆಗಬೇಕಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಗಮನಿಸಿದ್ದೇನೆ. ನಾನು ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಹೀಗಾಗಿ ಕ್ವಾರಂಟೈನ್ ಆಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಆಪ್ತ ಕಾರ್ಯದರ್ಶಿಗೆ ಕೊರೊನಾ ಬಂದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿರುವ ಸುಧಾಕರ್ ಅವರ ಕಚೇರಿ ಹಾಗೂ ಆಪ್ತ ಕಾರ್ಯದರ್ಶಿ ಕಚೇರಿಗಳನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ.