ಮೈಸೂರು: ರಾಜ್ಯದಲ್ಲಿ ಆನ್ ಲೈನ್ ತರಗತಿಗಳು ಪಿಯುಸಿವರೆಗೂ ರದ್ದಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದನೇ ತರಗತಿವರೆಗಿನ ಆನ್ ಲೈನ್ ಶಿಕ್ಷಣವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಸರ್ಕಾರದ ಈ ನಿಲುವು ಸರಿಯಾಗಿದೆ ಎಂದು ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರು.
ನಾನು ಮೊದಲಿನಿಂದಲೂ ಆನ್‌ಲೈನ್ ಶಿಕ್ಷಣ ಪದ್ಧತಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ನನ್ನ ಪ್ರಕಾರ ಪಿಯುಸಿವರೆಗೂ ಆನ್‌ಲೈನ್ ಶಿಕ್ಷಣ ರದ್ದು ಮಾಡಬೇಕು. ಶಾಲೆಯಲ್ಲೇ ಮಕ್ಕಳಿಗೆ ಪಾಠ ಮಾಡಬೇಕು. ಬರುವ ಅಕ್ಟೋಬರ್‌ವರೆಗೂ ಶಾಲೆಗಳನ್ನು ತೆರೆಯಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಇದೇ ವೇಳೆ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ನಾವು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ, ಈ ಬಗ್ಗೆ ಎಲ್ಲರೂ ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ ಎಂದರು.