ಚಿತ್ರದುರ್ಗ : ನಿನ್ನೆ ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಜಿಲ್ಲೆಯ ಹಲವೆಡೆ ಬೆಳೆದಿದ್ದ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿವೆ.
ಚಳ್ಳಕೆರೆ ತಾಲೂಕಿನ ತಿಮ್ಮನಾಯಕನಕೋಟೆಯಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಬೆಳೆ ಬಿರುಗಾಳಿಗೆ ಸಿಲುಕಿ ನಾಶವಾಗಿದೆ. ಫಸಲಿಗೆ ಬಂದಿದ್ದ ಸುಮಾರು 300ಕ್ಕೂ ಹೆಚ್ಚು ಬಾಳೆ ಗಿಡಗಳು ಧರೆಗುರುಳಿವೆ. ಇದರಿಂದ ಸಾಲ ಮಾಡಿ ಕೃಷಿ ಮಾಡಿದ್ದ ಬಸವರಾಜ, ಮೂರ್ತಪ್ಪ, ಪಾಲಣ್ಣ ಎನ್ನುವ ರೈತರು ಕಂಗಾಲಾಗಿದ್ದಾರೆ.
ಇನ್ನು ಜಿಲ್ಲೆಯ ಹಲವೆಡೆ ಬೀಸಿದ ಬಿರುಗಾಳಿಗೆ ನೂರಾರು ಮರಗಳು ನೆಲ ಕಚ್ಚಿವೆ. ಮನೆಯ ಶೀಟುಗಳು ಹಾರಿ ಹೋಗಿವೆ. ಹಿರಿಯೂರು- ಹೊಸದುರ್ಗ ರಸ್ತೆ ಮಧ್ಯೆ ಸಣ್ಣ ಮರ ಬಿದ್ದಿದೆ. ಈಗಾಗಲೇ ಜಿಲ್ಲೆಯಲ್ಲಿ ಲಾಕ್ ಡೌನ್ ನಿಂದಾಗಿ ಟೊಮೆಟೊ, ಬೂದುಗುಂಬಳ ಕಾಯಿ, ಹಾಗಲಕಾಯಿ, ಖರ್ಬೂಜ, ಕಲ್ಲಂಗಡಿ ಬೆಳೆಗಳು ನಾಶವಾಗಿದ್ದು ರೈತರು ಕಂಗಾಲಾಗಿದ್ದಾರೆ. ಈಗ ಸುರಿದಿರುವ ಈ ಮಳೆ ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿವೆ. ಇನ್ನು ಬೆಳೆ ಕಳೆದುಕೊಂಡಿರುವ ರೈತರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.








