ನೋ ಸರ್… ಅವನು ಬೇಡ.. ಅವನು ತಂಡವನ್ನೇ ಹಾಳು ಮಾಡುತ್ತಾನೆ….!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕತ್ವ ಇಂಡಿಯನ್ ಸಿಮೇಂಟ್ ಅಧೀನದಲ್ಲಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಅವರು ಸಿಎಸ್ಕೆ ತಂಡದ ಮಾಲೀಕ. ಆದ್ರೆ ಸಿಎಸ್ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇ ಅಂತಿಮ ವೇದ ವಾಕ್ಯ. ಧೋನಿ ಏನು ಹೇಳ್ತರೋ ಅದನ್ನು ಸಿಎಸ್ಕೆ ತಂಡದ ಮಾಲೀಕರು ಒಪ್ಪಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಸಿಎಸ್ಕೆ ತಂಡದಲ್ಲಿ ಧೋನಿಯ ಪವರ್ ಇದೆ.
ಹೌದು, ಸಿಎಸ್ಕೆ ತಂಡದ ಆಟಗಾರರಿಂದ ಹಿಡಿದು ಸಿಬ್ಬಂದಿಗಳ ನೇಮಕ ಕೂಡ ಧೋನಿ ಅಣತಿಯಂತೆ ನಡೆಯುತ್ತೆ. ಆದ್ರೆ ಧೋನಿ ಎಲ್ಲೂ ಕೂಡ ಮುಂಚೂಣಿಯಲ್ಲಿರುವುದಿಲ್ಲ. ಮೈದಾನದಲ್ಲಿ ಮಾತ್ರ ನಾಯಕನಾಗಿ ಮುಂಚೂಣಿಯಲ್ಲಿ ನಿಂತುಕೊಂಡು ಮುನ್ನಡೆಸುತ್ತಾರೆ. ಅದನ್ನು ಬಿಟ್ಟು ಪೂರ್ವಭಾವಿ ಸಭೆಯಲ್ಲಿ ಕೋಚ್ಗೆ ಸಲಹೆ ನೀಡುತ್ತಾರೆ. ಧೋನಿಯ ಸಲಹೆಯಂತೆ ಕೋಚ್ ಕಾರ್ಯರೂಪಕ್ಕೆ ತರುತ್ತಾರೆ. ಅಷ್ಟೇ ಯಾಕೆ ಸಿಎಸ್ಕೆ ತಂಡದ ಮಾಲೀಕ ಶ್ರೀನಿವಾಸನ್ ಕೂಡ ಧೋನಿ ಮಾತಿಗೆ ನೋ ಅನ್ನೊಲ್ಲ. ಅಷ್ಟರ ಮಟ್ಟಿಗೆ ಧೋನಿಯನ್ನು ನಂಬಿದ್ದಾರೆ.
ಈ ವಿಚಾರವನ್ನು ಸ್ವತಃ ಸಿಎಸ್ಕೆ ತಂಡದ ಮಾಲೀಕರಾದ ಶ್ರೀನಿವಾಸನ್ ಅವರೇ ಹೇಳಿಕೊಂಡಿದ್ದಾರೆ. ಶ್ರೀನಿವಾಸನ್ ಅವರು ತನ್ನ ಮಾಲೀಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅತ್ಯುತ್ತಮ ಆಟಗಾರನೊಬ್ಬನನ್ನು ಖರೀದಿ ಮಾಡಲು ಬಯಸಿದ್ದರು. ಈ ಬಗ್ಗೆ ಧೋನಿಯ ಬಳಿಯೂ ಹೇಳಿಕೊಂಡಿದ್ದರು. ಅದಕ್ಕೆ ಧೋನಿ ಉತ್ತರ ಹೀಗಿತ್ತು.. ಇಲ್ಲ ಸರ್, ಅವನು ಬೇಡ. ಅವನು ತಂಡದೊಳಗೆ ಬಂದ್ರೆ ಇಡೀ ತಂಡದ ವಾತಾವರಣವೇ ಹಾಳಾಗಿ ಹೋಗುತ್ತೆ ಎಂದು ಕಡ್ಡಿ ಮುರಿದಂಗೆ ಹೇಳಿದ್ದರು. ಧೋನಿಯ ಮಾತಿನಂತೆ ಶ್ರೀನಿವಾಸನ್ ಅವರು ಆ ಅತ್ಯುತ್ತಮ ಆಟಗಾರರನ್ನು ಖರೀದಿ ಮಾಡಲು ಮುಂದಾಗಲಿಲ್ಲ.
ಈ ವಿಚಾರವನ್ನು ಶ್ರೀನಿವಾಸನ್ ಅವರೇ ಬಹಿರಂಗಪಡಿಸಿದ್ರು. ಆದ್ರೆ ಆ ಅತ್ಯುತ್ತಮ ಆಟಗಾರ ಯಾರು ಎಂಬುದನ್ನು ಮಾತ್ರ ಹೇಳಲಿಲ್ಲ. ಅಷ್ಟರ ಮಟ್ಟಿಗೆ ಸಿಎಸ್ಕೆ ತಂಡದ ಮಹೇಂದ್ರ ಸಿಂಗ್ ಅವರನ್ನು ನಂಬಿಕೊಂಡಿದೆ. ತನ್ನ ಮಾಲೀಕನ ಸಲಹೆಯನ್ನು ದಿಕ್ಕರಿಸಿ ತಂಡದ ಹಿತವನ್ನು ಬಯಸುವ ನಾಯಕ ಧೋನಿಯನ್ನು ಸಿಎಸ್ಕೆ ಎಂದಾದ್ರೂ ಬಿಟ್ಟುಕೊಡುವುದುಂಟಾ ? ಅದಕ್ಕೆ ಸಿಎಸ್ಕೆ ಅಭಿಮಾನಿಗಳಿಗೂ ಧೋನಿಯ ಮೇಲೆ ಅಷ್ಟೊಂದು ಅಭಿಮಾನ.
ಸಿಎಸ್ಕೆ ತಂಡದ ನಾಯಕನಾಗಿರುವ ಧೋನಿ ತಂಡದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಧೋನಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸುವುದಿಲ್ಲ. ಹರಾಜಿಗಿಂತ ಮುನ್ನ ನಡೆಯುವ ಪೂರ್ವಭಾವಿ ಸಭೆಗಳಲ್ಲಿ ಭಾಗಿಯಾಗಿ ತರಬೇತುದಾರರಿಗೆ ಸಲಹೆ ನೀಡುತ್ತಾರೆ. ಧೋನಿಯ ಸಲಹೆಯಂತೆ ಕೋಚ್ ತಂಡವನ್ನು ಸನ್ನದ್ಧಗೊಳಿಸುತ್ತಾರೆ. 2009ರಿಂದ ಸಿಎಸ್ಕೆ ತಂಡದ ತರಬೇತುದಾರನಾಗಿ ನ್ಯೂಜಿಲೆಂಡ್ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಾನು ಮಹನ್ನೋನ್ನತ ಆಟಗಾರರ ಹೆಸರು ಹೇಳಿದಾಗ ಆತ ಬೇಡ ಎಂದು ಧೋನಿ ಹೇಳಿದ್ದರು. ನಮಗೆ ತಂಡದ ಒಗ್ಗಟ್ಟು ಮುಖ್ಯ. ಅಮೆರಿಕಾದಲ್ಲಿ ಫ್ರಾಂಚೈಸಿ ಆಧಾರಿತ ಕ್ರೀಡೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿವೆ ಎಂದು ಶ್ರೀನಿವಾಸನ್ ಹೇಳಿದ್ರು.
ಭಾರತದಲ್ಲಿ ನಾವು ಅದೇ ರೀತಿ ಆರಂಭಿಸಿದ್ದೇವೆ. ಆದ್ರೆ ನಾವು ಅದಕ್ಕೆ ಹೊಸಬರು. ಇಂಡಿಯನ್ ಸಿಮೆಂಟ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವ ನಮಗಿದೆ. ಜ್ಯೂನಿಯರ್ ಮಟ್ಟದಲ್ಲೂ ನಾವು ತಂಡವನ್ನು ಮುನ್ನಡೆಸಿದ್ದೇವೆ. ರಾಹುಲ್ ದ್ರಾವಿಡ್ ಕೂಡ ನಮ್ಮ ಭಾಗವಾಗಿದ್ದರು. ಇಲ್ಲಿ ಫ್ರಾಂಚೈಸಿ ಮುಖ್ಯವಾಗಿರುತ್ತೆ. ಅದೇ ರೀತಿ ತಂಡವೂ ಮುಖ್ಯವಾಗಿರುತ್ತೆ. ಆದ್ರೆ ಆಟಗಾರನಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಅಂತಾರೆ ಶ್ರೀನಿವಾಸನ್
ಐಪಿಎಲ್ ನಲ್ಲಿ ಅತ್ಯಂತ ಯಶಸ್ಸಿ ನಾಯಕರ ಸಾಲಿನಲ್ಲಿ ಧೋನಿ ಕೂಡ ಒಬ್ಬರು. ಧೋನಿ ಸಾರಥ್ಯದಲ್ಲಿ ಸಿಎಸ್ಕೆ ತಂಡ ಅದ್ಭುತವಾದ ಪ್ರದರ್ಶನವನ್ನೇ ನೀಡಿದೆ. ಏಳು ಫೈನಲ್ ಪಂದ್ಯಗಳನ್ನು ಆಡಿರುವ ಧೋನಿ ನಾಯಕತ್ವದ ಸಿಎಸ್ಕೆ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಕಳೆದ ವರ್ಷ ಕೇವಲ ಒಂದು ರನ್ಗಳಿಂದ ಧೋನಿ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲಲು ವಿಫಲರಾದ್ರು. ಸಿಎಸ್ಕೆ ಮಾಲೀಕರು ಧೋನಿಗೆ ಪೂರ್ತಿ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಅನೇಕರು ಹೇಳ್ತಾರೆ. ಇದು ನಿಜ ಕೂಡ. ಅಲ್ಲದೆ ತಂಡದ ಯಶಸ್ಸಿಗೆ ಇದು ಕೂಡ ಪ್ರಮುಖ ಕಾರಣವಾಗಿದೆ ಎಂದು ಶ್ರೀನಿವಾಸನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸನ್ನದ್ದಗೊಳ್ಳುತ್ತಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇನಲ್ಲಿ ಟೂರ್ನಿ ನಡೆಯಲಿದೆ. ಅಲ್ಲದೆ ಯುಎಇಗೆ ಪ್ರಯಾಣ ಬೆಳೆಸುವ ಮೊದಲ ತಂಡ ಸಿಎಸ್ಕೆಯಾಗಲಿದೆ. 2019ರಿಂದ ಧೋನಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಕಳೆದ ಫೆಬ್ರವರಿ -ಮಾರ್ಚ್ ನಲ್ಲಿ ಧೋನಿ ಕೆಲ ಸಮಯ ಸಿಎಸ್ಕೆ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿದ್ದರು. ನಂತರ ಲಾಕ್ ಡೌನ್, ಕೊರೋನಾದಿಂದಾಗಿ ರಾಂಚಿಯ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಧೋನಿ ಜೊತೆಗೆ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಕೂಡ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.