ದಕ್ಷಿಣಕನ್ನಡ : ಮಾಜಿ ಸಚಿವ ಯು.ಟಿ ಖಾದರ್ ಅವರು ಪಿಪಿಇ ಕಿಟ್ ಧರಿಸದೇ ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದು, ಅಂತ್ಯಸಂಸ್ಕಾರದಲ್ಲಿ ಕೆಲಸ ಮಾಡಬೇಕೆಂಬ ಭಾವನೆ ಬಂತು ಹಾಗಾಗಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಸೋಂಕಿತನ ಮೃತದೇಹದಿಂದ ವೈರಸ್ ಹರಡೋದಿಲ್ಲ. ಮೃತ ದೇಹದಿಂದ ವೈರಸ್ ಹರಡುತ್ತೆ ಅಂತಾ ವೈದ್ಯಕೀಯ ಅಧ್ಯಯನ ಹೇಳಿಲ್ಲ. ಹಾಗಾಗಿ ಪಿಪಿಐ ಕಿಟ್ ನ ಅಗತ್ಯವಿಲ್ಲ ಎಂದ ಖಾದರ್, ಮಕ್ಕಳು ತಂದೆಯ ಹೆಣವನ್ನು ನೋಡೋಕೆ ಬರಲ್ಲ. ಜನ ಅಷ್ಟು ಭಯ ಭೀತರಾಗಿದ್ದಾರೆ. ಧಾರ್ಮಿಕ ವಿಧಿವಿಧಾನ ಮಾಡೋಕೆ ಜನರಿಗೆ ಹೆದರಿಕೆಯಿದೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೇ ಇರೋದು ತಪ್ಪು. ಆದರೆ, ಜನರಿಗೆ ಮನವರಿಕೆ ಮಾಡಲು ನಾನು ಧರಿಸಿಲ್ಲ. ಜನರು ಧಾರ್ಮಿಕ ವಿಧಿ-ವಿಧಾನ ಪ್ರಕಾರ ಅಂತ್ಯಕ್ರಿಯೆ ಮಾಡಬಹುದು ಎಂದು ಯು.ಟಿ ಖಾದರ್ ನುಡಿದರು.
ಮುಂದುವರಿದು ಮಾತನಾಡಿದ ಖಾದರ್, ಮುಂದಿನ ಮೂರು ತಿಂಗಳು ಬಹಳ ಸವಾಲಿನ ತಿಂಗಳಾಗಿವೆ ಎಂದು ಎಚ್ಚರಿಸಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ವ್ಯವಸ್ಥೆ ಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಜನರಿಗೆ ಎಲ್ಲಾ ಅಂಗಡಿಗಳನ್ನು ತೆರೆಯಬೇಕಾಗಿಲ್ಲ, ಅಗತ್ಯ ಅಂಗಡಿಗಳನ್ನು ಮಾತ್ರ ತೆರೆಯಬಹುದು. ಜನರಿಗೆ ಈ ಬಗ್ಗೆ ಜಿಲ್ಲಾಡಳಿತ ಮನವರಿಕೆ ಮಾಡಬೇಕು. ಮಂಗಳೂರಿನಲ್ಲಿ ಮೀನುಗಾರಿಕಾ ಬಂದರು ಬಂದ್ ಮಾಡಲಾಗಿದೆ. ಈಗ ಎಲ್ಲಾ ಕಡೆ ರಸ್ತೆಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ.