ಉತ್ತರ ಕೊರಿಯಾ – ದೇಶದಲ್ಲಿ ಮೊದಲ ಶಂಕಿತ ಕೊರೋನವೈರಸ್ ಪ್ರಕರಣ ಪತ್ತೆ
ಸಿಯೋಲ್, ಜುಲೈ 27: ದೇಶದ ಮೊದಲ ಶಂಕಿತ ಕೊರೋನವೈರಸ್ ಪ್ರಕರಣ ಪತ್ತೆಯಾದ ನಂತರ ಉತ್ತರ ಕೊರಿಯಾದ ಅಧಿಕಾರಿಗಳು ಗಡಿ ನಗರವಾದ ಕೈಸೊಂಗ್ ಲಾಕ್ ಡೌನ್ ಘೋಷಿಸಿದ್ದಾರೆ
ನಾಯಕ ಕಿಮ್ ಜೊಂಗ್ ಉನ್ ತುರ್ತು ಪೊಲಿಟ್ಬ್ಯುರೊ ಸಭೆ ನಡೆಸಿ ಗರಿಷ್ಠ ತುರ್ತು ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ವೈರಸ್ ವಿರುದ್ಧ ಹೆಚ್ಚಿನ ಎಚ್ಚರಿಕೆಯನ್ನು ಕೈಗೊಳ್ಳಲು ಆದೇಶ ನೀಡಿದ್ದಾರೆ ಎಂದು ಅಲ್ಲಿನ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್ಎ ತಿಳಿಸಿದೆ.
ಸೋಂಕು ಇನ್ನೂ ದೃಢಪಟ್ಟಿಲ್ಲ ಆದರೆ ಸೋಂಕು ದೃಢಪಟ್ಟರೆ, ಇದು ಉತ್ತರ ಕೊರಿಯಾದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ. ಕೋವಿಡ್-19 ರ ಮೊದಲ ಪ್ರಕರಣವಾಗುತ್ತದೆ. ಅಲ್ಲಿನ ವೈದ್ಯಕೀಯ ಮೂಲಸೌಕರ್ಯವು ಶೋಚನೀಯವಾಗಿದ್ದು ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ಅಸಮರ್ಪಕವೆಂದು ಪರಿಗಣಿಸಲಾಗಿದೆ.

ಮೂರು ವರ್ಷಗಳ ಹಿಂದೆ ದಕ್ಷಿಣ ಕೊರಿಯಾಕ್ಕೆ ತೆರಳಿದ್ದ ವ್ಯಕ್ತಿ ಯೊಬ್ಬ ಜುಲೈ 19 ರಂದು ಉಭಯ ದೇಶಗಳನ್ನು ವಿಭಜಿಸುವ ಭಾರಿ ಭದ್ರವಾದ ಗಡಿಯನ್ನು ಅಕ್ರಮವಾಗಿ ದಾಟಿ ಒಳನುಸುಳಿರುವುದರಿಂದ ಕೊರೊನಾ ಸೋಂಕಿನ ಶಂಕೆ ವ್ಯಕ್ತವಾಗಿದೆ ಎಂದು ಕೆಸಿಎನ್ಎ ಹೇಳಿದೆ. ಆದರೆ ಮೈನ್ಫೀಲ್ಡ್ಗಳು ಮತ್ತು ಕಾವಲುಗಾರರಿಂದ ಗಡಿ ವಿಚಾರದಲ್ಲಿ ತುಂಬಾ ಭದ್ರತೆಯನ್ನು ಹೊಂದಿರುವ ಗಡಿಯನ್ನು ಅಕ್ರಮವಾಗಿ ದಾಟಿ ಒಳನುಸುಳುವುದು ಅಸಾಧ್ಯವಾದ ಮಾತಾಗಿದ್ದು, ಕೊರಿಯಾ ನಡೆ ಅನುಮಾನ ಮೂಡಿಸಿದೆ.








