ಉತ್ತರ ಕೊರಿಯಾ – ದೇಶದ ಆಡಳಿತದ ಹೆಚ್ಚಿನ ಹೊಣೆಯನ್ನು ತನ್ನ ತಂಗಿಗೆ ವಹಿಸಿದ ಕಿಮ್
ಸಿಯೋಲ್, ಅಗಸ್ಟ್22: ದಕ್ಷಿಣ ಕೊರಿಯಾದ ಗುಪ್ತಚರ ಮಾಹಿತಿಯ ಪ್ರಕಾರ, ಉತ್ತರ ಕೊರಿಯಾದ ನಾಯಕನ ಕೆಲಸದ ಒತ್ತಡ ಕಡಿಮೆಗೊಳಿಸುವ ಸಲುವಾಗಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಉನ್ ತನ್ನ ಸಹೋದರಿ ಕಿಮ್ ಯೋ ಜೊಂಗ್ ಅವರಿಗೆ ಸಾಮಾನ್ಯ ರಾಜ್ಯ ವ್ಯವಹಾರಗಳ ಮೇಲ್ವಿಚಾರಣೆಯ ಭಾಗಶಃ ಅಧಿಕಾರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಕಿಮ್ ಜೊಂಗ್ ಉನ್ ತನ್ನ ತಂಗಿಗೆ ಹೆಚ್ಚಿನ ಅಧಿಕಾರವನ್ನು ಹಸ್ತಾಂತರಿಸುವ ನಿರ್ಧಾರವು ತಾನು ಈಗ ದೇಶದ ಡಿ-ಫ್ಯಾಕ್ಟೊ ಸೆಕೆಂಡ್ ಇನ್ ಕಮಾಂಡ್ ಎಂಬ ವಾದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆ (ಎನ್ಐಎಸ್) ತನ್ನ ದೇಶದ ಶಾಸಕರಿಗೆ ತಿಳಿಸಿದೆ. ಎನ್ಐಎಸ್ ಬ್ರೀಫಿಂಗ್ಗೆ ಹಾಜರಾದ ಪ್ರತಿನಿಧಿ ಕಿಮ್ ಬೈಂಗ್-ಕೀ ಅವರ ಕಚೇರಿಯ ಪ್ರಕಾರ, ಕಿಮ್ ಜೊಂಗ್ ಉನ್ ಇನ್ನೂ ಸಂಪೂರ್ಣ ಅಧಿಕಾರವನ್ನು ಹೊಂದಿದ್ದು, ಅಂತಿಮ ನಿರ್ಣಯವನ್ನು ಕೈಗೊಳ್ಳುತ್ತಾರೆ.
ಸುಮಾರು ಒಂಬತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಕಿಮ್ ಜೊಂಗ್ ಉನ್ ಅವರ ಮೇಲಿನ ಒತ್ತಡಗಳನ್ನು ನಿವಾರಿಸಲು ಉತ್ತರ ಕೊರಿಯಾದ ಸರ್ಕಾರ ಮತ್ತು ಆಡಳಿತರೂಢ ಪಕ್ಷದ ಇತರ ಉನ್ನತ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ತಜ್ಞರ ಪ್ರಕಾರ, ಉತ್ತರ ಕೊರಿಯಾದಲ್ಲಿ ಕಿಮ್ ಜೊಂಗ್ ಉನ್ ಸರಿಯಾದ ಅಡಳಿತ ನಡೆಸುತ್ತಿಲ್ಲ ಮತ್ತು ಕಳೆದ ಎರಡು ದಶಕಗಳಲ್ಲಿ ದೇಶದ ಆರ್ಥಿಕತೆಯು ಬಹಳಷ್ಟು ಕೆಟ್ಟದಾಗಿದೆ. ಸರ್ಕಾರದ ಅಸಮರ್ಥತೆಯ ಆರೋಪದಿಂದ ಮುಕ್ತನಾಗಲು ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಿಮ್ ಜೊಂಗ್ ಉನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.