ಸಿಯೋಲ್: ಈಗಾಗಲೇ ರಷ್ಯಾ ಹಾಗೂ ಉಕ್ರೇನ್ ಯುದ್ಧ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಈ ಮಧ್ಯೆ ರಷ್ಯಾದ (Russia) ಬೆಂಬಲಕ್ಕೆ ಉತ್ತರ ಕೊರಿಯಾ (North Korea) ನಿಂತಿದೆ. ಹೀಗಾಗಿ ಉತ್ತರ ಕೊರಿಯಾ ಸಾವಿರಾರು ಸೈನಿಕರನ್ನು ಕಳುಹಿಸಲು ನಿರ್ಧರಿಸಿದೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ.
ವಿಶೇಷ ಪಡೆಗಳು ಸೇರಿದಂತೆ, 12,000 ಸೈನಿಕರ ನಾಲ್ಕು ಬ್ರಿಗೇಡ್ಗಳನ್ನು ಕಳುಹಿಸಲು ಉತ್ತರ ಕೊರಿಯಾ ನಿರ್ಧರಿಸಿದೆ. ಈ ಪಡೆಗಳು ರಷ್ಯಾ ಕಡೆ ಪ್ರಯಾಣ ಬೆಳೆಸಿವೆ ಎಂದು ರಾಷ್ಟ್ರೀಯ ಗುಪ್ತಚರ ಸೇವೆ (ಎನ್ಐಎಸ್) ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದ ಸಿಯೋಲ್ನ ಬೇಹುಗಾರಿಕಾ ಸಂಸ್ಥೆ, ಉತ್ತರ ಕೊರಿಯಾ ರಷ್ಯಾದ ವ್ಲಾಡಿವೋಸ್ಟಾಕ್ ನಲ್ಲಿ 1,500 ವಿಶೇಷ ಪಡೆಗಳ ತುಕಡಿಯನ್ನು ನಿಯೋಜಿಸಿದೆ. ಶೀಘ್ರದಲ್ಲೇ ಹೆಚ್ಚಿನ ಪಡೆಗಳನ್ನು ಕಳುಹಿಸಲಿದೆ. ತನ್ನ ವಿಶೇಷ ಪಡೆಗಳನ್ನು ರಷ್ಯಾದ ನೌಕಾಪಡೆಯ ಹಡಗಿನ ಮೂಲಕ ರಷ್ಯಾಕ್ಕೆ ಕಳುಹಿಸಲಾಗಿದೆ ಎಂದಿದೆ.
ಈ ವಿಚಾರದ ಊಹಾಪೋಹಗಳ ನಡುವೆ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ತುರ್ತು ಭದ್ರತಾ ಸಭೆ ನಡೆಸಿದ್ದಾರೆ. ಸಭೆಯ ಬಳಿಕ ಉತ್ತರ ಕೊರಿಯಾದ ಸೈನಿಕರು ರಷ್ಯಾದಲ್ಲಿ ತರಬೇತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.