ವಾಸೀಮ್ ಅಕ್ರಮ್, ಪಾಕ್ ಕ್ರಿಕೆಟ್ ತಂಡಕ್ಕೆ ಕೋಚ್ ಆಗಲ್ಲ ಎನ್ನಲು ಕಾರಣ ಏನು ?
ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗಲು ಮಾಜಿ ನಾಯಕ ವಾಸೀಮ್ ಅಕ್ರಮ್ ನಿರಾಕರಿಸುತ್ತಿದ್ದಾರೆ. ವಾಸೀಮ್ ಅಕ್ರಮ್ ಪಾಕ್ ತಂಡದ ಆಟಗಾರನಾಗಿ, ನಾಯಕನಾಗಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಲ್ಲದೆ ವಿಶ್ವ ಕ್ರಿಕೆಟ್ ನಲ್ಲಿ ವಾಸೀಮ್ ಅಕ್ರಮ್ ತನ್ನದೇ ಆದ ಗೌರವವನ್ನು ಪಡೆದುಕೊಂಡಿದ್ದಾರೆ.
ಆದ್ರೆ ಪಾಕ್ ಕ್ರಿಕೆಟ್ ತಂಡದ ಕೋಚ್ ಆಗಲು ಮಾತ್ರ ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣವನ್ನು ವಾಸೀಮ್ ಅಕ್ರಮ್ ಹೇಳುತ್ತಿದ್ದಾರೆ.
ನಾನು ಮೂರ್ಖನಲ್ಲ. ಅಭಿಮಾನಿಗಳು ಕೋಚ್ ಬಗ್ಗೆ ಕೆಟ್ಟದಾಗಿ ವರ್ತಿಸುವುದನ್ನು ನಾನು ಇಷ್ಟಪಡುವುದಿಲ್ಲ. ಕೋಚ್ ಆಡುವುದಿಲ್ಲ. ಆಟಗಾರರು ಆಡುತ್ತಾರೆ. ಕೋಚ್ ಯೋಜನೆಗಳನ್ನು ರೂಪಿಸುತ್ತಾನೆ. ತಂಡದ ಆಟಗಾರರಿಗೆ ಮಾರ್ಗದರ್ಶನಗಳನ್ನು ನೀಡುತ್ತಾನೆ. ಫಲಿತಾಂಶ ಆಟಗಾರರು ಆಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಹಾಗಂತ ಪಂದ್ಯದ ಕೆಟ್ಟ ಫಲಿತಾಂಶವನ್ನು ಕೋಚ್ ಮೇಲೆ ಹಾಕೋದನ್ನು ನೋಡಲು ನಾನು ಇಷ್ಟಪಡುವುದಿಲ್ಲ ಎಂದು ವಾಸೀಮ್ ಅಕ್ರಮ್ ಹೇಳಿದ್ದಾರೆ.
ಇನ್ನು ವೈಯಕ್ತಿಕ ಕಾರಣದಿಂದಾಗಿ ಕೊಚ್ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ಸಹ ಹೇಳಿದ್ದಾರೆ. ತಂಡದ ಕೋಚ್ ಅದ್ರೆ ವರ್ಷದ 250 ದಿನಗಳ ಕಾಲ ತಂಡದ ಜೊತೆ ಇರಬೇಕು. ಹೀಗಾಗಿ ಕುಟುಂಬದ ಜೊತೆ ಕಾಲ ಕಳೆಯಲು ಸಮಯವಿರುವುದಿಲ್ಲ. ಆದ್ರೂ ನಾನು ತಂಡದ ಆಟಗಾರರು ಕೇಳಿದಾಗ ಎಲ್ಲಾ ರೀತಿಯ ಸಹಾಯ, ಮಾರ್ಗದರ್ಶನ, ಸಲಹೆಗಳನ್ನು ಕೊಡಲು ಸಿದ್ಧನಿದ್ದೇನೆ. ಈಗಾಗಲೇ ಹಲವಾರು ಆಟಗಾರರಿಗೆ ಸಹಾಯ ಮಾಡಿದ್ದೇನೆ. ಬಹುತೇಕ ಎಲ್ಲಾ ಆಟಗಾರರಲ್ಲೂ ನನ್ನ ಮೊಬೈಲ್ ನಂಬರ್ ಕೂಡ ಇದೆ ಎಂದು ಹೇಳಿದ್ದಾರೆ.
ಈಗಾಗಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಆಗೋದು ಅಷ್ಟೊಂದು ಸುಲಭವಿಲ್ಲ. ಯಾಕಂದ್ರೆ ಪಾಕ್ ಕ್ರಿಕೆಟ್ ತಂಡದ ಕೋಚ್ ಆಗಿ ಅನುಭವಿಸಿದವರಿಗೆ ಮಾತ್ರ ಗೊತ್ತು. ದಶಕಗಳ ಹಿಂದೆ ದೇಶಿ ಕೋಚ್‍ಗಳ ಬದಲು ವಿದೇಶಿ ಕೋಚ್ ಗಳ ಮೊರೆ ಹೋದ್ರೂ ಪಿಸಿಬಿಗೆ ಸೂಕ್ತ ಫಲಿತಾಂಶ ಬಂದಿರಲಿಲ್ಲ. ಆನಂತರ ವಕಾರ್ ಯೂನಸ್, ಜಾವೇದ್ ಮಿಯಾಂದಾದ್ ಇತ್ತೀಚೆಗೆ ಮಿಸ್ಬಾ ಉಲ್ ಹಕ್ ಮೊದಲಾದವರು ಪಾಕ್ ತಂಡದ ಕೋಚ್ ಆಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು.
ಬಹುಶಃ ಈ ಕಾರಣದಿಂದಲೇ ವಾಸೀಮ್ ಅಕ್ರಮ್ ಪಾಕ್ ತಂಡದ ಕೊಚ್ ಆಗಿ ತನ್ನ ಹೆಸರನ್ನು ಹಾಳು ಮಾಡಿಕೊಳ್ಳಲು ಸಿದ್ಧರಿಲ್ಲ ಅನ್ಸುತ್ತೆ. ಹೀಗಾಗಿ ಪಾಕ್ ಕ್ರಿಕೆಟ್ ತಂಡದ ಕೋಚ್ ಹುದ್ದೆಯನ್ನು ವಾಸೀಮ್ ಅಕ್ರಮ್ ನಿರಾಕರಿಸುತ್ತಿದ್ದಾರೆ.
ಅಂದ ಹಾಗೇ, ವಾಸೀಮ್ ಅಕ್ರಮ್ ವಿಶ್ವ ಕ್ರಿಕೆಟ್ ನಲ್ಲಿ ಹಲವಾರು ಬೌಲರ್ ಗಳಿಗೆ ಟಿಪ್ಸ್ ಗಳನ್ನು ನೀಡಿದ್ದಾರೆ. ಇದ್ರಲ್ಲಿ ಭಾರತೀಯ ಬೌಲರ್ ಗಳು ಕೂಡ ಹೊರತಲ್ಲ. ಅಷ್ಟೇ ಅಲ್ಲ, ವಾಸೀಮ್ ಅಕ್ರಮ್ ಅವರು ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಬಿಡುವಿನ ವೇಳೆಯಲ್ಲಿ ವೀಕ್ಷಕ ವಿವರಣೆಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.








