ಬೆಂಗಳೂರು: ರೇಣುಕಾಸ್ವಾಮಿ (Renukaswamy Case) ಅಪಹರಣ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣಗೆರೆ ಶೆಡ್ (Pattanagere Shed) ಮಾಲೀಕರಿಗೆ ಈಗ ನಡುಕ ಶುರುವಾಗಿದೆ.
ರೇಣುಕಾಸ್ವಾಮಿಯನ್ನು ಅಪಹರಿಸಿ, ಇದೇ ಶೆಡ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರಿಂದಾಗಿ ಶೆಡ್ ಮುನ್ನೆಲೆಗೆ ಬಂದಿದೆ. ಈ ಬೆನ್ನಲ್ಲೇ ಪಟ್ಟಣಗೆರೆ ಶೆಡ್‍ಗೆ ಬಿಬಿಎಂಪಿ ಶಾಕ್ ನೀಡಿದೆ.
ರೇಣುಕಾ ಸ್ವಾಮಿಯನ್ನು ಹತ್ಯೆ ಮಾಡಿದ ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಟಿಸ್ ನೀಡಿದೆ. 2008 – 09 ರಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ ಎಂದು ಕೆಂಗೇರಿ ಉಪ ವಲಯ ಸಹಾಯಕ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ನೋಟಿಸ್ ನಲ್ಲಿ 15 ದಿನಗಳಲ್ಲಿ ಆಸ್ತಿ ತಮ್ಮದೇ ಎಂದು ಘೋಷಿಸಿಕೊಂಡು ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.