ಬೆಂಗಳೂರು : ಭಾರತ ಚಂದ್ರನ ಮೇಲೆ ಹೆಜ್ಜೆ ಇಟ್ಟು ಹೊಸ ಇತಿಹಾಸ ನಿರ್ಮಿಸಿದೆ. ಈಗ ಇಸ್ರೋದ (ISRO) ಕೇಂದ್ರ ಕಚೇರಿ ಬೆಂಗಳೂರು (Bengaluru) ಚಂದ್ರಯಾನ -3ರ (Chandrayaan-3) ನಡುವೆ ನೇರ ಸಂಬಂಧ ಉಂಟಾಗುವಂತಾಗಿದೆ.
ನೌಕೆಯ ಅಭಿವೃದ್ಧಿಯಿಂದ ಆರಂಭವಾಗಿ ಸಂಪೂರ್ಣ ನಿರ್ವಹಣೆ ಹಾಗೂ ಬಾಹ್ಯಾಕಾಶದಲ್ಲಿ ನೌಕೆಯ ಮೇಲೆ ಕಣ್ಗಾವಲಿರಿಸಿರುವುದು ಪೀಣ್ಯದಲ್ಲಿರುವ ಇಸ್ಟ್ರಾಕ್‍ನಿಂದ. ಈ ಕೇಂದ್ರ ರಾಕೆಟ್ ಉಡ್ಡಯನದಿಂದ ಉಪಗ್ರಹ ಕಕ್ಷೆಗೆ ಸೇರಿಸುವುದು ಸೇರಿದಂತೆ ಅದರ ಜೀವಿತಾವಧಿಯ ಟ್ರ್ಯಾಕಿಂಗ್ ಮಾಡುತ್ತದೆ. ಎಲ್ಲವನ್ನೂ ಇದೇ ಕಮಾಂಡ್ ಮಾಡುತ್ತದೆ.
ಚಂದ್ರಯಾನ-3 ಉಡ್ಡಯನದ ನಂತರ ಭೂಮಿಯ ಕಕ್ಷೆ ತೊರೆದು ಚಂದ್ರನ ಕಕ್ಷೆ ಸೇರಿದ್ದು, ನೌಕೆಯಿಂದ ಲ್ಯಾಂಡರ್ ಪ್ರತ್ಯೇಕಗೊಂಡು ಚಂದ್ರಯಾನ-2ರ ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿ, ಚಂದ್ರನ ಮೇಲೆ ಇಳಿದಾಗ ಸಂದೇಶ ತಲುಪಿದ್ದು ಇದೇ ಕೇಂದ್ರಕ್ಕೆ. ಇದು ಇಸ್ರೋದ ನೌಕೆಗಳ ಮಾರ್ಗವನ್ನು ನಿರ್ವಹಿಸುವ ಮತ್ತು ನೌಕೆಗೆ ಬೇಕಾದ ಸೂಚನೆಗಳನ್ನು ಕಳುಹಿಸುವ ಕೇಂದ್ರವಾಗಿದೆ. ಹೀಗಾಗಿ ಎಲ್ಲರ ಚಿತ್ತ ಈಗ ಬೆಂಗಳೂರಿನತ್ತ ನೆಟ್ಟಿದೆ.