ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ದೇಶಾದ್ಯಂತ ಸೋಂಕಿತರ ಸಂಖ್ಯೆ 14 ಸಾವಿರದ ಗಡಿದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಇಲ್ಲಿಯವರೆಗೂ ಒಟ್ಟು 14 ಸಾವಿರದ 378 ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ 1991 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 11 ಸಾವಿರದ 906 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಇಲ್ಲಿಯವರೆಗೂ 480 ಜನರು ಮಹಾಮಾರಿಯಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಶುಕ್ರವಾರದವರೆಗೆ ಕೊರೊನಾ ಸೋಂಕಿತರ ಸಂಖ್ಯೆ 13,387 ಇತ್ತು. 437 ಮಂದಿ ಸಾವನ್ನಪ್ಪಿದ್ದರು. 1749 ಮಂದಿ ಡಿಸ್ಚಾರ್ಜ್ ಆಗಿದ್ದರು. ಕಳೆದ 24ಗಂಟೆಯಲ್ಲಿ ಎಲ್ಲ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಾಗಿದೆ.
ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಕೊರೊನಾ ವಿಪರೀತವಾಗಿ ಬಾಧಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 3323 ಮಂದಿ ಸೋಂಕಿತರು ಇದ್ದಾರೆ. ದೆಹಲಿಯಲ್ಲಿ 1707, ತಮಿಳುನಾಡಿನಲ್ಲಿ 1323, ರಾಜಸ್ಥಾನದಲ್ಲಿ 1229 ಜನ ವೈರಸ್ ಪೀಡಿತರು ಇದ್ದಾರೆ.








