ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಬಿಹಾರದ ಖಾಸಗಿ ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ನರ್ಸ್ ವೊಬ್ಬರು ವೈದನ್ಯ ಖಾಸಗಿ ಅಂಗವನ್ನು ಬ್ಲೇಡ್ ನಿಂದ ಕೊಯ್ದ ಘಟನೆ ನಡೆದಿದೆ.
ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೋಲ್ಕತ್ತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯ ಮಧ್ಯೆ ಬಿಹಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ ನಡೆದಿದೆ.
ಅತ್ಯಾಚಾರ ಯತ್ನ ಮಾಡಿದವರಲ್ಲಿ ಒಬ್ಬರು ವೈದ್ಯರಾಗಿದ್ದು, ಸಂಸ್ಥೆಯ ನಿರ್ವಾಹಕರೂ ಆಗಿದ್ದಾರೆ. ಅತ್ಯಾಚಾರದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ನರ್ಸ್ ಬ್ಲೇಡ್ ನಿಂದ ಕೊಯ್ದು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಮುಸ್ರಿಘರಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾಪುರದ ಆರ್ಬಿಎಸ್ ಹೆಲ್ತ್ ಕೇರ್ ಸೆಂಟರ್ ನಲ್ಲಿ ಬುಧವಾರ ರಾತ್ರಿ ನರ್ಸ್ ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದಾಗ, ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಇಬ್ಬರು ಮದ್ಯಪಾನ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಸಂಜಯ್ ಹಾಗೂ ಇತರರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನರ್ಸ್ ವೈದ್ಯನ ಗುಪ್ತಾಂಗಕ್ಕೆ ಬ್ಲೇಡ್ನಿಂದ ಸೀಳಿದ್ದಾರೆ. ಆಸ್ಪತ್ರೆಯ ಹೊರಗಿರುವ ಮೈದಾನದಲ್ಲಿ ಅಡಗಿ ನಂತರ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಸದ್ಯ ಪೊಲೀಸರ ತಂಡ ಆಸ್ಪತ್ರೆಗೆ ಆಗಮಿಸಿದ್ದು, ನರ್ಸ್ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೈದ್ಯ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳನ್ನು ಸುನಿಲ್ ಕುಮಾರ್ ಗುಪ್ತಾ ಹಾಗೂ ಅವಧೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸುವ ಮೊದಲು ಮೂವರು ಆಸ್ಪತ್ರೆ ಒಳಗಿನಿಂದ ಲಾಕ್ ಮಾಡಿದ್ದರು. ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ವೈದ್ಯರ ಖಾಸಗಿ ಅಂಗವನ್ನು ಕತ್ತರಿಸಿದ ಬ್ಲೇಡ್ ಸಹ ಪತ್ತೆಯಾಗಿದೆ. ಸ್ಥಳದಲ್ಲಿ ಮದ್ಯದ ಬಾಟಲಿ ಕೂಡ ಪತ್ತೆಯಾಗಿದೆ. ಆದರೆ, ಬಿಹಾರದಲ್ಲಿ ಮದ್ಯ ನಿಷೇಧವಿದ್ದು, ಈ ಕುರಿತು ಕೂಡ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.