ಆಕ್ಷೇಪಾರ್ಹ ಪೋಸ್ಟ್ ಮಾಡಿದರೆ ಶಿಕ್ಷೆ ತಪ್ಪದು
Offensive posting is punishable
ಫ್ರೀ ಇಂಟರ್ನೆಟ್ ಇದೆ ಹಾಗೆ ಸಾಮಾಜಿಕ ಜಾಲತಾಣಗಳು ಇವೆ ಎಂದು ನಾನು ಪೋಸ್ಟ್ ಮಾಡಿದ್ದೇ ಸತ್ಯ, ನನಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಬೇಕಾಬಿಟ್ಟಿ ಮಾತನಾಡಿದ್ದೇ ನಿಜ ಎನ್ನವರು ಇದ್ದಾರೆ. ಅಲ್ಲದೇ ಅಸಭ್ಯ ಮತ್ತು ಅವಹೇಳನಕಾರಿ ಪೋಸ್ಟ್ ಹಾಕುತ್ತೇನೆ ಅಂತ ಬೆದರಿಕೆ ಒಡ್ಡುತ್ತಾರೆ. ಇಲ್ಲವೇ ಇನ್ನೊಬ್ಬರ ತೇಜೊವಧೆ ಆಗುವ ಹಾಗೆ ಅಸಭ್ಯ ಮತ್ತು ಅವಹೇಳನಕಾರಿ ಪೋಸ್ಟ್ ಹಾಕುತ್ತಾರೆ.
ಇದನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಮತ್ತು ಅವಹೇಳನಕಾರಿ ಪೋಸ್ಟ್ ಹಾಕುವವರಿಗೆ ಶಿಕ್ಷೆ ಅಗತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರೋಪಿಗಳು ಕ್ಷಮೆಯಾಚಿಸಿ ಕ್ರಿಮಿನಲ್ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮ ಪೋಸ್ಟ್ ಗಳಿಗೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಪ್ರಶಾಂತ್ ಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.
ತಮಿಳು ನಟ, ಮಾಜಿ ಶಾಸಕ ಎಸ್.ವಿ. ಶೇಖರ್ ಅವರು ಪತ್ರಕರ್ತೆಯನ್ನು ಗುರಿಯಾಗಿಸಿಕೊಂಡು 2018ರಲ್ಲಿ ಫೇಸ್ಬುಕ್ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಪತ್ರಕರ್ತೆ ಅಂದಿನ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಅಸಭ್ಯವಾಗಿ ಆರೋಪ ಮಾಡಿದ್ದರು. ಈ ಬಗ್ಗೆ ಶೇಖರ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅವರ ಪೋಸ್ಟ್ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು. ಅಲ್ಲದೇ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ಶೇಖರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದಾಖಲಾಗಿದ್ದ ಪ್ರಕರಣ ರದ್ದತಿ ನಿರಾಕರಿಸಿ, ಮಹತ್ವದ ತೀರ್ಪು ನೀಡಿದೆ.