ಉಡುಪಿ: ಅಂಬೇಡ್ಕರ್ ಭವನದಲ್ಲಿಯೇ ಎಣ್ಣೆ ಪಾರ್ಟಿ ನಡೆದ ಘಟನೆಯೊಂದು ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಡಿಎಸ್ಎಸ್ ಮುಖಂಡ ಶ್ಯಾಮ ರಾಜ್ ಭಿರ್ತಿ ಸೇರಿದಂತೆ ಹಲವರು ಅನುಮತಿ ಪಡೆಯದೆ ಅಂಬೇಡ್ಕರ್ ಭವನದಲ್ಲಿ (Ambedkar Bhavan) ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ತೆಂಕಭರ್ತಿಯಲ್ಲಿ ನಡೆದಿದೆ.
ಶ್ಯಾಮ ರಾಜ್ ಭಿರ್ತಿ ತಮ್ಮ ಮಗ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿದ್ದರು ಎನ್ನಲಾಗಿದೆ. ಮೊದಲು ಕಾರ್ಯಕ್ರಮ ಕೈಗೊಂಡು ನಂತರ ಯಾವುದೇ ಪೂರ್ವಾನುಮತಿ ಇಲ್ಲದೆ ಜಿಲ್ಲಾ ಸಂಚಾಲಕ, ಡಿಎಸ್ಎಸ್ ಮುಖಂಡರು, ಸ್ಥಳೀಯರು ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಸವಿತಾ ಎಂಬವರು ಭವನಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆಗ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.