ಡೆಲ್ಟಾ ಹರಡುವಿಕೆಯನ್ನ ಒಮಿಕ್ರಾನ್ ತಡೆಯುತ್ತಿದೆ ಅನ್ನೋದು ಸುಳ್ಳು – ತಜ್ಞರ ಎಚ್ಚರಿಕೆ
ವಿಶ್ವದ್ಯಾಂತ ಕೋವಿಡ್ 3ನೇ ಅಲೆ ಈಗಾಗಲೇ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಒಮಿಕ್ರಾನ್ ಭೀತಿ ಜನರನ್ನ ಭಯಭೀತರನ್ನಾಗಿಸಿದೆ. ಒಂದೆಡೆ ಒಮಿಕ್ರಾನ್ ಡೆಲ್ಟಾಗಿಂತ ವೇಗವಾಗಿ ಹರಡುತ್ತಿದೆ ಎನ್ನಲಾಗ್ತಿದೆ. ಜೊತೆಗೆ ಡೆಲ್ಟಾ ಹರಡುವಿಕೆಯನ್ನ ಒಮಿಕ್ರಾನ್ ತಡೆಯುತ್ತೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಬೇರೂರುತ್ತಿದೆ.. ಆದ್ರೆ ವಾಸ್ತವದಲ್ಲಿ ಇದೊಂದು ಬಹಳ ಅಪಾಯಕಾರಿ ನಂಬಿಕೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ..
ಹೌದು.. ಡೆಲ್ಟಾ ರೂಪಾಂತರ ತಳಿಯ ವಿರುದ್ಧ ಒಮಿಕ್ರಾನ್ ರೂಪಾಂತರ ತಳಿಯು ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂಬ ಅಭಿಪ್ರಾಯವು ಅತ್ಯಂತ ಅಪಾಯಕಾರಿ. ಬೇಜವಾಬ್ದಾರಿಯುತ ಜನರಷ್ಟೇ ಇಂತಹ ತಪ್ಪು ಮಾಹಿತಿಯನ್ನು ಹರಡುತ್ತಾರೆ. ಇದಕ್ಕೆ ಕಿವಿಗೊಡದೆ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವೈರಾಣುವಿನ ಬೇರೆಲ್ಲಾ ರೂಪಾಂತರ ತಳಿಗಳಿಗಿಂತ ಒಮಿಕ್ರಾನ್ ಅತ್ಯಂತ ಕ್ಷಿಪ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಜತೆಗೆ ಈ ತಳಿಯಿಂದ ಬರುವ ಕೋವಿಡ್ ನ ತೀವ್ರತೆ ಕಡಿಮೆ ಇದೆ. ಹೀಗಾಗಿಯೇ ಒಮಿಕ್ರಾನ್ ನಿಂದ ಕೋವಿಡ್ ಬಂದು ಗುಣಮುಖವಾದರೆ ಕೋವಿಡ್ ಪ್ರತಿರೋಧ ಶಕ್ತಿ ಸೃಷ್ಟಿಯಾಗುತ್ತದೆ. ಆ ಪ್ರತಿರೋಧ ಶಕ್ತಿಯು ಡೆಲ್ಟಾ ತಳಿಯಿಂದ ಕೋವಿಡ್ ತಗಲುವುದನ್ನು ತಡೆಯುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅಷ್ಟೇ ಅಲ್ಲದೇ ಇತ್ತೀಚೆಗೆ ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಒಮಿಕ್ರಾನ್ ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂದು ಘೋಷಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ ಈ ರೀತಿಯ ಅಭಿಪ್ರಾಯ ಹರಡುತ್ತಿರುವವರಿಗೆ ವೈರಾಣುವಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದರ್ಥ. ಭಾರತೀಯರಲ್ಲಿ ಅಪೌಷ್ಟಿಕತೆ ಇದೆ ಇಲ್ಲಿ ಹೆಚ್ಚು ಪರಿಸರ ಮಾಲಿನ್ಯವಿದೆ. ಜತೆಗೆ ಮಧುಮೇಹದಿಂದ ಬಳಲುತ್ತಿರುವವ ಪ್ರಮಾಣವೂ ಹೆಚ್ಚು. ಒಮಿಕ್ರಾನ್‌ನಿಂದ ಬರುವ ಕೋವಿಡ್‌ನ ತೀವ್ರತೆಯನ್ನು ಈ ಅಂಶಗಳು ಪ್ರಭಾವಿಸುತ್ತವೆ. ಹೀಗಾಗಿ ಒಮಿಕ್ರಾನ್ ನೈಸರ್ಗಿಕ ಲಸಿಕೆಯಂತೆ ಕೆಲಸ ಮಾಡುತ್ತದೆ ಎಂಬ ನಂಬಿಕೆ ಅಪಾಯಕಾರಿ ಎಂದು ಕೇಂದ್ರ ಸರ್ಕಾರದ ಕೋವಿಡ್ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆಯ ಶಾಹಿದ್ ಜಮೀಲ್ ಹೇಳಿದ್ದಾರೆ.








