1962ರಲ್ಲಿ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿದ್ದು ಮರೆಯಲು ಸಾಧ್ಯವಿಲ್ಲ- ಕಾಂಗ್ರೆಸ್ ಗೆ ಪವಾರ್ ತಿರುಗೇಟು
ಮುಂಬೈ, ಜೂನ್ 28: ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದ ಘರ್ಷಣೆ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಚಾಟಿ ಬೀಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯ ವಿಚಾರವನ್ನು ರಾಜಕೀಯಗೊಳಿಸಬಾರದು ಮತ್ತು 1962 ರ ಯುದ್ಧದ ಬಳಿಕ ಚೀನಾದವರು ದೊಡ್ಡ ಪ್ರಮಾಣದ ಭೂಮಿಯನ್ನು ಆಕ್ರಮಿಸಿಕೊಂಡಾಗ ಏನಾಯಿತು ಎಂಬುವುದು ನೆನಪಿನಲ್ಲಿಡಬೇಕು ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಭೂಭಾಗವನ್ನು ಚೀನಾ ಆಕ್ರಮಿಸಿದೆ, ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಶರಣಾಗಿದ್ದಾರೆ. ಲಡಾಖ್‌ನಲ್ಲಿ ಚೀನಾ ಭಾರತದ ಭೂಪ್ರದೇಶವನ್ನು ಆಕ್ರಮಿಸಿದೆಯೇ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು ಎಂದೆಲ್ಲಾ ಆರೋಪಿಸಿದ್ದರು. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ರಕ್ಷಣಾ ಸಚಿವ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು 1962ರಲ್ಲಿ ಯುದ್ಧ ನಡೆದ ಬಳಿಕ ಏನು ನಡೆಯಿತು ಎಂಬುದನ್ನು ನಾವು ಮರೆಯಬಾರದು. ಅಂದು ಭಾರತದ 45 ಸಾವಿರ ಚದರ ಕಿಲೋಮೀಟರ್ ನಷ್ಟು ಜಾಗವನ್ನು ಚೀನಾ ಆಕ್ರಮಿಸಿಕೊಂಡಾಗ ಏನಾಯಿತು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ. ಇಂದು ಗಡಿ ವಿವಾದದ ವಿಚಾರದಲ್ಲಿ ನಾವು ಆರೋಪ ಮಾಡುವಾಗ ಈ ಹಿಂದೆ ಏನಾಗಿತ್ತು ಎಂಬ ಬಗ್ಗೆಯೂ ನೆನಪು ಮಾಡಿಕೊಳ್ಳಬೇಕು. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದ್ದು ಇದರಲ್ಲಿ ಯಾರು ಕೂಡ ರಾಜಕೀಯವನ್ನು ಎಳೆದು ತರಬಾರದು ಎಂದು ವರದಿಗಾರರು ಹೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.