ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ, ದಕ್ಷಿಣ ಆಫ್ರಿಕಾ ಮಹಿಳಾ ತಂಡವನ್ನು 4 ರನ್ ಗಳಿಂದ ರೋಚಕವಾಗಿ ಸೋಲಿಸಿತು. ಆದರೆ, ಈ ಪಂದ್ಯ ಮಾತ್ರ ಮಹಿಳಾ ಕ್ರಿಕೆಟ್ ಲೋಕದಲ್ಲಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 325 ರನ್ ಕಲೆಹಾಕಿತ್ತು. ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡ 321 ರನ್ ಗಳಿಸಿತು. ಎರಡು ತಂಡಗಳಿಂದ ಬರೋಬ್ಬರಿ 646 ರನ್ ದಾಖಲಾದವು. ಇದಲ್ಲದೆ ಪಂದ್ಯದಲ್ಲಿ ಒಟ್ಟು 4 ಶತಕಗಳೂ ಮೂಡಿ ಬಂದವು. ಒಟ್ಟು 4 ಶತಕಗಳು ದಾಖಲಾಗಿದ್ದು ವಿಶ್ವ ದಾಖಲೆಯಾಗಿದೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಪಂದ್ಯವೊಂದರಲ್ಲಿ ನಾಲ್ಕು ಶತಕಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾ ಪರ ನಾಯಕಿ ಲಾರಾ ವೂಲ್‌ವರ್ತ್ 135 ರನ್ ಗಳಿಸಿದರೆ, ಮರಿಜಾನೆ ಕ್ಯಾಪ್ ಕೂಡ 114 ರನ್ ಗಳಿಸಿದರು. ಇನ್ನು ಬಾರತದ ಪರ ನಾಯಕಿ ಹರ್ಮನ್‌ಪ್ರೀತ್ ಹಾಗೂ ಸ್ಮೃತಿ ಮಂಧಾನ ಶತಕ ಬಾರಿಸಿದರು.
ಸ್ಮೃತಿ ಮಂಧಾನ ಸತತ ಎರಡನೇ ಶತಕ ಸಿಡಿಸಿ ಮಿಂಚಿದರು. ಪಂದ್ಯದಲ್ಲಿ 120 ಎಸೆತಗಳನ್ನು ಎದುರಿಸಿದ ಸ್ಮೃತಿ 18 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 136 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೂಡ 88 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 103 ರನ್ ಗಳಿಸಿದರು. ಈ ಇಬ್ಬರ ನಡುವೆ 136 ಎಸೆತಗಳಲ್ಲಿ 171 ರನ್‌ಗಳ ದಾಖಲೆಯ ಜೊತೆಯಾಟ ಮೂಡಿ ಬಂದಿತು. ಹೀಗಾಗಿ ಈ ಪಂದ್ಯ ಮಹಿಳಾ ಕ್ರಿಕೆಟ್ ಲೋಕದಲ್ಲಿ ಭರ್ಜರಿ ಕಾಳಗ ನಡೆದ ಪಂದ್ಯವಾಗಿ ದಾಖಲಾಯಿತು.