ಬೆಂಗಳೂರು: ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳೂ ಇಲ್ಲ, ಮಿತ್ರರೂ ಇಲ್ಲ ಎಂಬ ಗಾದೆ ಕರ್ನಾಟಕದ ರಾಜಕಾರಣದ ಮಟ್ಟಿಗೆ ಆಗಾಗ ಸಾಬೀತಾಗುತ್ತಲೇ ಇದೆ.
ಯಾವ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ಬರುವುದಿಲ್ಲವೋ ಆಗ ಈ ಗಾದೆ ಮಾತು ಪದೇ ಪದೆ ಹೌದು ಎನ್ನಿಸುತ್ತದೆ. ಪರಸ್ಪರ ರಾಜಕೀಯವಾಗಿ ಕಿತ್ತಾಡಿಕೊಳ್ಳುವ ರಾಜಕೀಯ ಪಕ್ಷಗಳ ನಾಯಕರು, ಬೆಳಗಾಗುವುದರೊಳಗೆ ಮಿತ್ರರಾಗಿ ಬಿಟ್ಟಿರುತ್ತಾರೆ. ಮಿತ್ರರಾದವರು ಶತೃಗಳಾಗಿ ಬಿಟ್ಟಿರುತ್ತಾರೆ. ಇದಕ್ಕೆ ಕಳೆದ ವರ್ಷ ಪತನವಾದ ಮೈತ್ರಿ ಕಾಂಗ್ರೆಸ್-ಮೈತ್ರಿ ಸರ್ಕಾರ ಸ್ಪಷ್ಟ ನಿದರ್ಶನವಾಗಿದೆ.

ಮೈತ್ರಿ ಸರ್ಕಾರ ಪತನಗೊಂಡು ಇಂದಿಗೆ ಒಂದು ವರ್ಷ. ಕಾಂಗ್ರೆಸ್-ಜೆಡಿಎಸ್‍ನ ಶಾಸಕರೇ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದು ಈಗ ಇತಿಹಾಸ. ಅವರಲ್ಲಿ ಬಹುತೇಕರು ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿ ಕನಸು ಕಂಡಿದ್ದವರಲ್ಲಿ ಈಗ ಸಚಿವರಾಗಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಸಚಿವರಾದವರು ಮಾಜಿಗಳಾಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದವರು ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ಇದೇ ಅಲ್ಲವೇ, ಕಾಲ ಚಕ್ರದ ಮಹಿಮೆ.
ಸರ್ಕಾರ ಪತನಕ್ಕೆ ಒಂದು ವರ್ಷ…!
2018ರಲ್ಲಿ ನಡೆದ ವಿಧಾನಸಭೆ ಚುನಾವನೆಯಲ್ಲಿ ಕಾಂಗ್ರೆಸ್ 80 ಹಾಗೂ ಜೆಡಿಎಸ್ 38 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 105 ಸ್ಥಾನಗಳನ್ನು ಗೆದ್ದು ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಇಬ್ಬರು ಮಾತ್ರ ಪಕ್ಷೇತರರಾಗಿ ಆಯ್ಕೆಯಾಗಿದ್ದರಿಂದ ಬಿಜೆಪಿಗೆ ಅವರ ಬೆಂಬಲ ಪಡೆದು ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.
ಆದರೆ, ಯಡಿಯೂರಪ್ಪ ಮಾತ್ರ ಛಲಬಿಡದ ತ್ರಿವಿಕ್ರಮನಂತೆ ಸರ್ಕಾರ ರಚಿಸುವ ಸಾಹಸಕ್ಕೆ ಕೈಹಾಕಿದ್ದರು. ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಪ್ರಯತ್ನ ನಡೆಸಿದರೂ ಮೂರೇ ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ವಿಧಾನಸಭೆಯಲ್ಲಿ ನಡೆದ ಬಹುಮತ ಸಾಬೀತಿಗೆ ನಡೆದ ಸರ್ಕಸ್ ಇಡೀ ರಾಜ್ಯದ ಜನರ ಮನದಲ್ಲಿ ಇನ್ನೂ ಹಸಿರಾಗಿಯೇ ಇದೆ. ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ನಾಂದಿ ಹಾಡಿತು.
ಮೈತ್ರಿ ಸರ್ಕಾರ ರಚನೆಯಾಗಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆದರು. ಆದರೆ, ಮುಂದೆ ನಡೆದದ್ದೇ ನಿಜವಾದ ಮುಳ್ಳಿನ ತಂತಿ ಮೇಲಿನ ನಡಿಗೆ.
ಸರ್ಕಾರ ರಚನೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರಲ್ಲಿ ಇದ್ದ ವಿಶ್ವಾಸ ಕುಂದುತ್ತಾ ಹೋಗಿ ಅಪನಂಬಿಕೆ, ಅಂತರ ಹೆಚ್ಚುತ್ತಾ ಹೋಯಿತು. ಸಚಿವ ಸ್ಥಾನದ ಆಕಾಂಕ್ಷಿಗಳು ಒತ್ತಡ ಹೇರಲಾರಂಭಿಸುತ್ತಿದ್ದಂತೆ ಅದೇ ಕಗ್ಗಂಟಾಗಿ ಸರ್ಕಾರದ ವಿರುದ್ಧ ಬಂಡಾಯ ಏಳಲು ಅಡಿಪಾಯ ಹಾಕಿಕೊಟ್ಟಿತು.
ಅಲ್ಲಿಂದ ಶುರುವಾದ ಕಾಂಗ್ರೆಸ್, ಜೆಡಿಎಸ್‍ಮ 18 ಶಾಸಕರ ಬಂಡಾಯ ಸರ್ಕಾರ ಪತನದೊಂದಿಗೆ ಅಂತ್ಯಗೊಂಡಿತು. ಬಿಜೆಪಿ ಆಪರೇಶನ್ ಕಮಲ ಬಗ್ಗೆ ಉಭಯ ಪಕ್ಷದ ನಾಯಕರಿಗೆ ಗೊತ್ತಿದ್ದರೂ, ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಒಬ್ಬರ ಮೇಲೆ ಮತ್ತೊಬ್ಬರು ರಾಜಕೀಯ ಕೆಸರೆರಚಾಟ ನಡೆಸುತ್ತಲೇ ಕೈಚೆಲ್ಲಿ ಕುಳಿತರು. ದೆಹಲಿಯಿಂದ ಬಂದ ಹಿರಿಯ ನಾಯಕರು ಮಾಡಿದ ಸಂಧಾನದ ಪ್ರಯತ್ನಗಳೂ ವಿಫಲವಾದವು.
ಕೊನೆಗೆ ಹೊಸಪೇಟೆ ಶಾಸಕ ಆನಂದ್‍ಸಿಂಗ್ ರಾಜೀನಾಮೆಯೊಂದಿಗೆ ಮೈತ್ರಿ ಸರ್ಕಾರದ ಪತನಕ್ಕೆ ಮೊದಲ ಮುಹೂರ್ತ ಇಟ್ಟಂತಾಯಿತು. ನಂತರ ಒಬ್ಬೊಬ್ಬರೇ, ಮತ್ತೊಮ್ಮೆ ಸಾಮೂಹಿಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಹಸ್ಯ ಸ್ಥಳ ಸೇರುವಂತಾಯಿತು.
ಸರ್ಕಾರದ ವಿರುದ್ಧ ಬಂಡಾಯವೆದ್ದ ಶಾಸಕರನ್ನು ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹಗೊಳಿಸಿದರೂ, ಬಹುಮತ ಸಾಬೀತುಪಡಿಸುವಲ್ಲಿ ಕೈ-ತೆನೆ ನಾಯಕರು ವಿಫಲವಾದರು. ಹೊರಗೆ ಎಲ್ಲಾ ಒಟ್ಟಾಗಿಯೇ ಇದ್ದೇವೆ ಎಂದು ಹೇಳಿಕೊಂಡರೂ ಅಂತರಂಗದಲ್ಲಿ ಬೇರೆಯದೇ ಇತ್ತು.
ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತು ಮಾಡುವುದಕ್ಕೆ ಕುಮಾರಸ್ವಾಮಿ ಅಣಿಯಾದರು. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಗೊತ್ತಿದ್ದೂ, ರಾಜಕೀಯವಾಗಿ ಬಿಜೆಪಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರು. ಸುಮಾರು ನಾಲ್ಕೈದು ದಿನ ವಿಶ್ವಾಸಮತ ಯಾಚನೆ ಚರ್ಚೆಗೆ ಅವಕಾಶ ನೀಡಿ ಬಿಜೆಪಿ ವಿರುದ್ಧದ ತಮ್ಮ ಆಕ್ರೋಶ ರಾಜ್ಯದ ಜನತೆಗೆ ಗೊತ್ತಾಗಬೇಕೆಂಬ ಹಠದೊಂದಿಗೆ ಪರ್ಯಾವಸಾನಗೊಂಡಿದ್ದು ಈಗ ಇತಿಹಾಸ.
ಕೊನೆಗೆ 2019ರ ಜುಲೈ.23ರಂದು ಕುಮಾರಸ್ವಾಮಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇತಿಹಾಸದ ಪುಟಗಳಲ್ಲಿ ಸೇರಿ ಹೋಯಿತು.
ಅಲ್ಲಿಯವರೆಗೆ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು ಸರ್ಕಾರ ಪತನಕ್ಕೆ ಅವರು ಕಾರಣ, ಇವರು ಕಾರಣ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ.
ನಿನ್ನೆ ಮಾಜಿ ಮಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ ಹಳೆಯ ಕನವರಿಕೆ ಮಾತಿಗೆ ಸಿದ್ದರಾಮಯ್ಯ ಮುಗಿದ ಅಧ್ಯಾಯ ಎಂದಿರುವುದು ಅಂದು ಒಳಗೊಳಗೆ ಕುದಿಯುತ್ತಿದ್ದ ಅಸಮಧಾನದ ಹುತ್ತ ಎದ್ದಿರುವುದರ ಸತ್ಯ ದರ್ಶನವಲ್ಲದೆ ಮತ್ತೇನು ಅಲ್ಲ.
ಸರ್ಕಾರ ಪತನಗೊಂಡು ವರ್ಷ ಕಳೆದು ಹೋಗಿದೆ. ಹೊಸ ಸರ್ಕಾರ ರಚನೆ ಮಾಡಿದ ಉತ್ಸಾಹದಲ್ಲಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಮಹಾಮಾರಿ ಕೊರೊನಾ, ನೆಮ್ಮದಿಯ ದಿನಗಳನ್ನೇ ಕಸಿದುಕೊಂಡಂತೆ ಮಾಡಿರುವುದು ವಿಪರ್ಯಾಸವೇ ಸರಿ.








