ಜುಲೈ 1 ರಿಂದ ಆನ್‍ಲೈನ್ ಶಾಲೆ ಆರಂಭ
ಬೆಂಗಳೂರು : ಜುಲೈ ಒಂದರಿಂದ ಚಂದನ ವಾಹಿನಿಯ ಮೂಲಕ ಎಲ್ಲಾ ತರಗತಿಗಳ ಪಾಠ ಆರಂಭಿಸುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು. ಅಲ್ಲದೆ ಈ ತರಗತಿಗಳು ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮದಲ್ಲೂ ಇರಲಿವೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸುರೇಶ್ ಕುಮಾರ್, ಜುಲೈ 1 ರಿಂದ ಚಂದನ ವಾಹಿನಿ ಮೂಲಕ ಎಲ್ಲಾ ತರಗತಿಗಳಿಗೆ ಪಾಠ ಆರಂಭಿಸುತ್ತೇವೆ.
ಕನ್ನಡದ ಜತೆ ಆಂಗ್ಲ ಮಾಧ್ಯಮದಲ್ಲೂ ಪಾಠಗಳಿರಲಿವೆ. ದೀಕ್ಷಾ ಪೋರ್ಟಲ್ನಲ್ಲಿ ಆಡಿಯೋ, ವಿಡಿಯೋ ನೀಡುತ್ತೇವೆ.
22 ಸಾವಿರ ವಿಷಯಗಳು ಇದರಲ್ಲಿದೆ. ಗ್ರಾಮೀಣ ಭಾಗದ ಶಿಕ್ಷಕರಿಗೆ ವಿಸ್ತೃತ ವಿವರ ಕಳುಹಿಸಲಾಗಿದೆ. ಒಂದು ತಿಂಗಳ ಸೇತುಬಂಧ ತರಗತಿ ಮಾಡುತ್ತೇವೆ.
ಕಳೆದ ವರ್ಷ ತರಗತಿಯಲ್ಲಿ ಭಾಗವಹಿಸಲು ಆಗದವರಿಗೆ ಇಲ್ಲಿ ಹಿಂದಿನ ವರ್ಷದ ತರಗತಿಯ ಸಣ್ಣ ವಿವರ ನೀಡುತ್ತೇವೆ ಎಂದರು.
ಇನ್ನು ತರಗತಿಗಳು ಸಿಬಿಎಸ್ಸಿ ಮಾದರಿಯಲ್ಲಿ ಮಾಡಲು ತೀರ್ಮಾನಿಸಿದ್ದು, ಶಿಕ್ಷಕರಿಗೆ ತರಬೇತಿ ನೀಡಲಾಗಿದೆ.
ಜುಲೈ 1 ರಿಂದ ಎಲ್ಲಾ ಶಾಲೆಯಲ್ಲಿ ಆನ್ಲೈನ್ ತರಗತಿ ಆರಂಭವಾಗಲಿದೆ. ಆನ್ಲೈನ್ ಸಾಧನ ಇಲ್ಲದವರು ಡೌನ್ಲೋಡ್ ಮಾಡಿಕೊಳ್ಳುವ ಅವಕಾಶಗಳನ್ನು ನೀಡುತ್ತೇವೆ. ಇನ್ನಷ್ಟು ಉನ್ನತೀಕರಣಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.