ಸತತ ಮೂರನೇ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಅರವಿಂದ ಕೇಜ್ರಿವಾಲ್ ಇದೇ ಫೆಬ್ರವರಿ 16ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ. ಆದರೆ ಈ ಪ್ರಮಾಣವಚನ ಕಾರ್ಯಕ್ರಮಕ್ಕೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗಾಗಲಿ ಅಥವಾ ರಾಜಕೀಯ ನಾಯಕರಿಗಾಗಲಿ ಆಮ್ ಆದ್ಮಿ ಪಕ್ಷ ಆಹ್ವಾನ ನೀಡಿಲ್ಲ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಗೋಪಾಲ್ ರಾಯ್ ತಿಳಿಸಿದ್ದಾರೆ. ಆದ್ರೆ ತನ್ನ ಕಟು ವಿರೋಧಿಯಾದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿರುವುದು ಇದೀಗ ಕೂತೂಹಲಕ್ಕೆ ಕಾರಣವಾಗಿದೆ.
ದೆಹಲಿ ಫಲಿತಾಂಶವನ್ನು ಹಲವು ಪಕ್ಷಗಳ ನಾಯಕರು ಸಂತೋಷದಿಂದ ಸ್ವಾಗತಿಸಿದ್ದರು. ಅಲ್ಲದೆ ಈ ಗೆಲುವಿಗೆ ಕಾರಣವಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ರ ಪ್ರಮಾಣವಚನದಲ್ಲಿ ಪ್ರತಿಪಕ್ಷಗಳ ಹಲವು ನಾಯಕರು ಪಾಲ್ಗೊಳ್ಳುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಇದೀಗ ಈ ನಿರೀಕ್ಷೆ ಸುಳ್ಳಾಗಿದೆ.