ಬೆಂಗಳೂರು: ಬೆಂಗಳೂರಿನ ದಾಸರಹಳ್ಳಿ ವಲಯದ ಮಲ್ಲಸಂದ್ರ ವಾರ್ಡ್ 13ರಲ್ಲಿ ನಾಳೆ(ಶನಿವಾರ) ಉದ್ಘಾಟನೆಗೆ ಸಜ್ಜಾಗಿರುವ ಪಾರ್ಕ್ ಕಾಮಗಾರಿಯಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ ಎಂದು ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಆರೋಪಿಸಿದ್ದಾರೆ.
ಈ ಜಾಗ ಹಿಂದೆ ಬೃಹತ್ ಬಂಡೆಯಾಗಿದ್ದು, ವಿಧಾನಸೌಧ-ವಿಕಾಸಸೌಧಗಳಿಗೆ ಇಲ್ಲಿನ ಬಂಡೆಯಿಂದ ಕಲ್ಲುಗಳ ಸರಬರಾಜು ಆಗುತ್ತಿತ್ತು. ಈ ಬಂಡೆ ಸದ್ಯ ಕಂದಾಯ ಇಲಾಖೆ ಸ್ವಾಧೀನದಲ್ಲಿ ಇತ್ತು. ಬಿಬಿಎಂಪಿಗೆ ಹಸ್ತಾಂತರ ಆಗದೇ ಇದ್ದರೂ ಕೋಟ್ಯಾಂತರ ರೂಪಾಯಿ ಸುರಿದು ಅಭಿವೃದ್ದಿ ಕಾಮಗಾರಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಸ್.ಮುನಿರಾಜು ಹಾಗೂ ಕಾರ್ಪೋರೇಟರ್ ಲೋಕೇಶ್ ವಿರುದ್ಧ ಹಾಲಿ ಶಾಸಕ ಆರ್.ಮಂಜುನಾಥ್ ಆರೋಪ ಮಾಡಿದ್ದಾರೆ.
ಕೆಆರ್‍ಐಡಿಎಲ್ ಯೋಜನೆಯಡಿ ಟೆಂಡರ್ ಕರೆಯದೇ ಕಾರ್ಪೋರೇಟರ್ ಲೋಕೇಶ್‍ರ ಬೇನಾಮಿ ಕಂಪನಿಗೆ ಗುತ್ತಿಗೆ ನೀಡಲಾಗಿದೆಯಂತೆ. ಪಾರ್ಕ್, ಆಡಿಟೋರಿಯಂ, ಪ್ರತಿಮೆಗಳು ಸೇರಿದಂತೆ 23 ಕೋಟಿ 75 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ.
ಸರ್ವೆ ನಂಬರ್ 33ರಲ್ಲಿ 7 ಎಕರೆ ಭೂಮಿ ಒತ್ತುವರಿ ಮಾಡಿ ಸೈಟ್ ಹಂಚಿಕೆ ಸಹ ಮಾಡಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಹೈಕೋರ್ಟ್ ಕಟ್ಟಿರುವ ಮನೆಗಳನ್ನ ತೆರವುಗೊಳಿಸಿ ಬಿಬಿಎಂಪಿಗೆ ಜಾಗ ಹಸ್ತಾಂತರಿಸುವಂತೆ ಕಂದಾಯ ಇಲಾಖೆಗೆ ಸೂಚಿಸಿದೆ.
ಆದ್ರೆ ಈವರೆಗೂ ಭೂಮಿ ಹಸ್ತಾಂತರ ಆಗಿಲ್ಲ. ಸದ್ಯ ಪ್ರಕರಣವನ್ನ ಬಿಬಿಎಂಪಿ ಆಯುಕ್ತರು ತನಿಖೆಗಾಗಿ ಟಿವಿಸಿಸಿ ವಿಜಿಲೆನ್ಸ್ ಗೆ ಹಸ್ತಾಂತರಿಸಿದ್ದಾರೆ.
ಒಟ್ಟಾರೆ, ಸಾಲು ಸಾಲು ಆರೋಪಗಳ ನಡುವೆಯೇ ಕೆಂಪೇಗೌಡ ಉದ್ಯಾನವನ ನಾಳೆ ಲೋಕಾರ್ಪಣೆಗೊಳ್ಳಲಿದ್ದು, ಟಿವಿಸಿಸಿ ತನಿಖೆಯ ನಂತರ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.