ವಿಪ್ರೋದ ಕೊರೋನಾ ಸೋಂಕಿತರ ಚಿಕಿತ್ಸಾ ಆಸ್ಪತ್ರೆ ಉದ್ಘಾಟನೆ
ಪುಣೆ, ಜೂನ್ 13: ವಿಪ್ರೋ ಕಂಪನಿ ಕೊರೋನಾ ಸೋಂಕಿತರಿಗಾಗಿಯೇ ತೆರೆದಿರುವ ನೂತನ ಆಸ್ಪತ್ರೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಉದ್ಘಾಟನೆ ಮಾಡಿದ್ದಾರೆ. ಇದು ದೇಶದ ಮೊದಲ ಕೊರೋನಾ ಸೋಂಕಿತರ ಚಿಕಿತ್ಸೆ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಪ್ರೋ ಕಂಪನಿ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 1,125 ಕೋಟಿ ರೂಪಾಯಿ ದೇಣಿಗೆಯನ್ನು ಸಹ ನೀಡಿದೆ.
ಪುಣೆಯ ಹಿಂಜೆವಾಡಿ ಬಳಿ ನಿರ್ಮಿಸಲಾಗಿರುವ 504 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆಯು 18 ವೆಂಟಿಲೇಟರ್, ಇಂಟೆನ್ಸೀವ್ ಕೇರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಜೊತೆಗೆ ಎರಡು ಆಧುನಿಕ ಹಾಗೂ ಅಗತ್ಯ ಸೌಲಭ್ಯಗಳಿರುವ ಆಂಬುಲೆನ್ಸ್ ಅನ್ನು ಸಹ ವಿಪ್ರೊ ನೀಡಿದೆ.
ವಿಪ್ರೋ ಕಳೆದ ಒಂದೂವರೆ ತಿಂಗಳಲ್ಲಿ ನಿರ್ಮಿಸಲಾಗಿರುವ ಈ ಸುಸಜ್ಜಿತ ಆಸ್ಪತ್ರೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸಲಕರಣಗಳನ್ನು ಬಳಸಿದ್ದು, ಕೊರೋನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ವಿಪ್ರೋ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.
ಬೆಂಗಳೂರು ಮೂಲದ ವಿಪ್ರೋ ಕಂಪನಿ ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮೇ ತಿಂಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ಅತ್ಯಂತ ಕ್ಷಿಪ್ರವಾಗಿ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿರುವ ಗುಣಮಟ್ಟದ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಮಹಾರಾಷ್ಟ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.