ಮಂಗಳ ದ್ರವ್ಯಗಳಲ್ಲೊಂದಾದ ಅರಿಶಿಣ ಎನ್ನುವ ಸನಾತನ ಪಾರಂಪರಿಕ ಮನೇಮದ್ದಿನ ಕುರಿತು ನಿಮಗೆಷ್ಟು ಗೊತ್ತು?
ನಮ್ಮ ಹಿಂದೂ ಧರ್ಮದಲ್ಲಿ ಅರಿಶಿಣವಿಲ್ಲದೇ ಯಾವ ಶುಭಕಾರ್ಯವೂ ಸಂಪನ್ನವಾಗಲಾರದು. ಅಡುಗೆ ಮನೆಯಿಂದ ಆರಂಭವಾಗಿ ಮದುವೆ ಮಂಟಪದವರೆಗೂ ಅರಿಶಿಣ ಬೇಕೇ ಬೇಕು. ಸೌಭಾಗ್ಯದ, ಮುತ್ತೈದೆತನದ ದ್ಯೋತಕವಾಗಿ ನಮ್ಮ ಹೆಂಗಳೆಯರ ಕೆನ್ನೆಗಳಲ್ಲಿ ಸದಾ ಶೋಭಿಸುತ್ತಲೇ ಇರುತ್ತದೆ ಈ ಅರಿಶಿಣ. ನಾವು ದಿನನಿತ್ಯ ಬಳಸುತ್ತಿರುವ ಅದೆಷ್ಟೋ ಆಹಾರ ಪದಾರ್ಥಗಳು ಕಲಬೆರಕೆಯಿಂದ, ರಾಸಾಯನಿಕಗಳಿಂದ ಕೂಡಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಖಚಿತ. ಆದರೆ ಅರಿಶಿಣದ ಉಪಯೋಗದಿಂದ ಆ ದುಷ್ಪರಿಣಾಮಗಳ ಹತೋಟಿಗೆ ಬರುತ್ತದೆ. ಏಕೆಂದರೆ ಅರಿಶಿಣ ಅತ್ಯುತ್ತಮ ನಂಜು ನಿವಾರಕ. ಇದು ಆಹಾರಕ್ಕೆ ಒಳ್ಳೆಯ ರುಚಿ, ಬಣ್ಣ ಮತ್ತು ಪರಿಮಳವನ್ನು ನೀಡುತ್ತದೆ.
ಅರಿಶಿಣಕ್ಕೆ ಸಂಸ್ಕೃತದಲ್ಲಿ ಹರಿದ್ರಾ, ತುಳುವಿನಲ್ಲಿ ಮಂಜೋಳ್, ಹಿಂದಿಯಲ್ಲಿ ಹಳ್ದಿ, ಇಂಗ್ಲೀಷ್ ನಲ್ಲಿ ಟರ್ಮರಿಕ್ ಎನ್ನುತ್ತಾರೆ. ಇದಕ್ಕಿರುವ ಇನ್ನಿತರ ಪರ್ಯಾಯ ಪದಗಳೆಂದರೆ ಕಾಂಚನೀ, ಕ್ರಿಮಿಘ್ನಾ, ಯೋಷಿತಪ್ರಿಯಾ, ಗೌರೀ, ವರವರ್ಣಿನೀ, ಪೀತಾ, ಹರಿತಾ, ಜಯಂತಿ, ಹಟ್ಟ ವಿಲಾಸಿನಿ, ನಿಶಾ ಇತ್ಯಾದಿ.
ಬಹುವಾರ್ಷಿಕ ಸಸ್ಯವಾದ ಅರಿಶಿಣವು ಸುಮಾರು ಒಂದರಿಂದ ಮೂರು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಯು 1 ರಿಂದ 2 ಮೀಟರ್ ಉದ್ದವಾಗಿರುತ್ತದೆ. ಅರಿಶಿಣದ ಗಡ್ಡೆಯು ಸುಗಂಧ ಪರಿಮಳ ಬೀರುತ್ತದೆ. ಭೂ ಅಂತರ್ಗತ ಕಾಂಡವನ್ನು ಹೊಂದಿರುವ ಈ ಸಸ್ಯವು ಹಳದಿ ಬಣ್ಣದ ಹೂವುಗಳನ್ನು ಬಿಡುತ್ತದೆ.
ಹರಿದ್ರಾ, ದಾರು ಹರಿದ್ರಾ, ವನಹರಿದ್ರಾ, ಆಮ್ರಗಂಧಿ ಹರಿದ್ರಾ ಎಂಬುದಾಗಿ ಅರಿಶಿಣದಲ್ಲಿ ನಾಲ್ಕು ವಿಧಗಳಿವೆ. ಅರಿಶಿಣದ ಅತ್ಯಂತ ಉಪಯುಕ್ತ ಅಂಶ ಅದರ ಬೇರು. ಅರಿಶಿಣ ಮತ್ತು ಶ್ರೀಗಂಧವನ್ನು ಪ್ರತಿದಿನ ತೇದು ಮುಖಕ್ಕೆ ಹಚ್ಚಿದರೆ ಮುಖವು ಕಾಂತಿಯುಕ್ತವಾಗುತ್ತದೆ. ಮೊಡವೆ ಮತ್ತಿತರ ಕಲೆಗಳು ಇದರಿಂದ ಮಾಯವಾಗುತ್ತದೆ. ಹುರಿದ ಅರಿಶಿಣದ ಪುಡಿಯನ್ನು ಜೇನಿನೊಂದಿಗೆ ಸೇವೆಸಿದರೆ ಅಸ್ತಮಾ, ಕೆಮ್ಮು ಗುಣವಾಗುತ್ತದೆ. ಶೀತ ನೆಗಡಿ ಇರುವಾಗ ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿಣ ಹಾಗೂ ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು. ರಕ್ತಹೀನತೆಯಿಂದ ಬಳಲುತ್ತಿರುವವರು ಅರಿಶಿಣವನ್ನು ತ್ರಿಫಲ ಚೂರ್ಣದೊಂದಿಗೆ ಬೆರೆಸಿ ತುಪ್ಪ, ಜೇನುತುಪ್ಪ ಸೇರಿಸಿ ಕುಡಿಯಬೇಕು. ಅರಿಶಿಣದ ಪುಡಿಯನ್ನು ನೀರಿನಲ್ಲಿ ಬೆರೆಸಿ, ಸ್ವಲ್ಪ ಪ್ರಮಾಣದ ಹುಣಸೆ ಎಲೆಯ ರಸವನ್ನು ಸೇರಿಸಿ ಕುಡಿಯುವುದರಿಂದ ಸಿಡುಬು ರೋಗಕ್ಕೆ ಒಳ್ಳೆಯದು.
ಅರಿಶಿಣದ ಚೂರ್ಣವನ್ನು ಶುಂಠಿಯೊಂದಿಗೆ ಸಮಾನ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಸಂಧಿವಾತದ ಸಮಸ್ಯೆಗೆ ಒಳ್ಳೆಯದು. ಅರಿಶಿಣವನ್ನು ಜೇನುತುಪ್ಪದಲ್ಲಿ ತೇದುಕೊಟ್ಟರೆ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಬಹುದು. ಅರಿಶಿಣ ಬೇರನ್ನು ಸುಟ್ಟು ಅದರ ಚೂರ್ಣವನ್ನು ಲೋಳೆರಸದಲ್ಲಿ ಬೆರೆಸಿ ಕುಡಿಯುವುದರಿಂದ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು