ಪಾಟ್ನಾ: ಮದುಮಗನೊಬ್ಬ ಹಸೆಮಣೆ ಏರಿದ ಎರಡನೇ ದಿನದಲ್ಲಿ ಮಹಾಮಾರಿ ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಆತನ ತಂದೆಯ ವಿರುದ್ಧ ಎಫ್ಐಆರ್ ದಾಖಲು ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಪಾಟ್ನಾ ಜಿಲ್ಲೆಯ ದೀಪಾಲಿ ಗ್ರಾಮದಲ್ಲಿ ಜೂ.15ರಂದು ಯುವಕನೊಬ್ಬನ ಮದುವೆ ನಡೆದಿತ್ತು. ಮದುವೆಯಾದ ಎರಡೇ ದಿನಕ್ಕೆ ನವವಿವಾಹಿತ ಕೊರೊನಾಗೆ ಮೃತಪಟ್ಟಿದ್ದ. ನಿಯಮಗಳನ್ನು ಗಾಳಿಗೆ ತೂರಿ ಅದ್ಧೂರಿಯಾಗಿ ಮದುವೆ ಸಮಾರಂಭ ಮಾಡಿದ್ದ ವರನ ತಂದೆ ಅಂಬಿಕಾ ಚೌಧರಿ ವಿರುದ್ಧ ಕೊಲೆ ಆರೋಪದಡಿ ಪಾಟ್ನಾ ಜಿಲ್ಲಾಡಳಿತ ಎಫ್ಐಆರ್ ದಾಖಲಿಸಿದೆ.
ಘಟನೆ ನಡೆದಿದ್ದು ಹೀಗೆ..!
ಜೂನ್ 15ರಂದು ದೀಪಾಲಿ ಗ್ರಾಮದಲ್ಲಿ ವರನ ಮದುವೆ ನಿಶ್ಚಯವಾಗಿತ್ತು. ಅಂದು ವರ ತೀವ್ರ ಜ್ವರದಿಂದ ಬಳಲುತ್ತಿದ್ದ. ನನಗೆ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಮದುವೆ ಮುಂದೂಡಿ ಎಂದು ವರ ತಂದೆ ಅಂಬಿಕಾ ಚೌಧರಿ ಬಳಿ ಕೇಳಿಕೊಂಡರೂ ತಲೆ ಕೆಡಿಸಿಕೊಂಡಿರಲಿಲ್ಲ. ಲಾಕ್ಡೌನ್ ಷರತ್ತುಗಳನ್ನು ಉಲ್ಲಂಘಿಸಿ ನೂರಾರು ಜನರನ್ನು ಸೇರಿ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದ್ದ.
ಮದುವೆ ಸಮಾರಂಭದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಯಾರೊಬ್ಬರೂ ಮಾಸ್ಕ್ ಧರಿಸದೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಜೂ.15ರ ಮಾರನೇ ದಿನವೇ ವರನಿಗೆ ಜ್ವರ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಆತನನ್ನು ಪಾಟ್ನಾದ ಏಮ್ಸ್ ಆಸ್ಪತ್ರೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಈ ಮದುವೆಯಲ್ಲಿ ಪಾಲ್ಗೊಂಡ 100ಕ್ಕೂ ಹೆಚ್ಚು ಜನರನ್ನು ಕೋವಿಡ್ ಪರೀಕ್ಷೆಗೆ ಗುರಿಪಡಿಸಲಾಯಿತು. ಅವರಲ್ಲಿ 113 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದಾದ ಬಳಿಕವೂ ಮಗನ ಮೃತದೇಹವನ್ನು ಜಿಲ್ಲಾಡಳಿತದ ಗಮನಕ್ಕೆ ತಾರದೇ ಅಂತ್ಯಕ್ರಿಕೆಯನ್ನೂ ಮುಗಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಾಟ್ನಾ ಜಿಲ್ಲಾಧಿಕಾರಿ ಕುಮಾರ್ ರವಿ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದರು. ತನಿಖೆ ನಡೆಸಿದ ಪಲಿಗಂಜ್ ನೇತೃತ್ವದ ಸಮಿತಿ, ವರನ ತಂದೆ ಅಂಬಿಕಾ ಚೌಧರಿ ತಪ್ಪಿತಸ್ಥ ಎಂದು ವರದಿ ನೀಡಿತ್ತು. ಈ ವರದಿ ಆಧಾರದ ಮೇಲೆ ಚೌಧರಿ ವಿರುದ್ಧ ಕೊಲೆ ಆರೋಪದ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ.








