ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಈ ಬಾರಿ ಭಾರೀ ಬೇಡಿಕೆ ಬಂದಿದ್ದು, 69 ಪ್ರಶಸ್ತಿಗೆ ಸಾವಿರಕ್ಕೂ ಅಧಿಕ ಅರ್ಜಿಗಳು ಹರಿದು ಬಂದಿವೆ.
ಈ ವರ್ಷ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. 69 ಪ್ರಶಸ್ತಿಗಳಿಗೆ 1,200ಕ್ಕೂ ಅಧಿಕ ಅರ್ಜಿಗಳು ಸಂದಾಯವಾಗಿದೆ. ಆನ್ ಲೈನ್ ಸೇವಾಸಿಂಧು ಪೋರ್ಟಲ್ ಮೂಲಕ ಬರೋಬ್ಬರಿ 1,135ಕ್ಕೂ ಅಧಿಕ ಹಾಗೂ ಭೌತಿಕವಾಗಿ 85ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ.
ರಾಜಕೀಯ ನಾಯಕರು, ಸಂಘ-ಸಂಸ್ಥೆಗಳು, ಪಕ್ಷದ ಪ್ರಮುಖರಿಂದಲೂ ಪ್ರಶಸ್ತಿಗೆ ಹೆಸರುಗಳು ಶಿಪಾರಸು ಆಗಿವೆ. ಮಾಜಿ ಸಚಿವರು, ವಿವಿಧ ಕ್ಷೇತ್ರದ ಗಣ್ಯರು, ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪ್ರಶಸ್ತಿ ಪಡೆಯುವುದಕ್ಕಾಗಿ ತನ್ನದೆಯಾದ ನಿಯಮಗಳಿವೆ. ಆದರೂ ಲಾಬಿ ಮಾತ್ರ ನಡೆಯುತ್ತಲೇ ಇದೆ. ಈ ಬಾರಿಯ 69 ಪ್ರಶಸ್ತಿಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿ ರಚಿಸಲಾಗಿದೆ. ಈ ಪ್ರಶಸ್ತಿ ಪಡೆಯುವ ಸಾಧಕರು 60 ವರ್ಷ ಮೇಲ್ಪಟ್ಟವರಾಗಿರಬೇಕು. ಪ್ರಮಾಣಿಕವಾಗಿ ಸರ್ಕಾರ ಉತ್ತಮ ಸಾಧಕರಿಗೆ ಈ ಪ್ರಶಸ್ತಿ ನೀಡಬೇಕು. ಸದ್ಯ ಸಾಧಕರ ಆಯ್ಕೆ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.