ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಮಲ ಪಾಳಯವನ್ನು ಅಧಿಕಾರದಿಂದ ಕೆಳಗಿಳಿಸಲು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೊಸ ದಾಳ ಉರುಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳಿಗೆ ನಿಜವಾಗಿಯೂ ಪ್ರಾಮಾಣಿಕ ಆಸಕ್ತಿಯಿದ್ದರೆ, ತಾವು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅಥವಾ ಬಹುಜನ ಸಮಾಜ ಪಕ್ಷದ ಮಾಯಾವತಿ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಘೋಷಿಸಿದ್ದಾರೆ.
ಖಾಸಗಿ ಟಿವಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಹೈದರಾಬಾದ್ ಲೋಕಸಭಾ ಸಂಸದ ಓವೈಸಿ, ಉತ್ತರ ಪ್ರದೇಶದ ಚುನಾವಣಾ ರಣಕಣಕ್ಕೆ ಎಐಎಂಐಎಂ ಪ್ರವೇಶವನ್ನು ವಿರೋಧಿಸುತ್ತಿರುವ ಪ್ರಾದೇಶಿಕ ಪಕ್ಷಗಳ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ. ಕೇವಲ ಭಾಷಣಗಳಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಹೇಳುವ ಪಕ್ಷಗಳು, ಮುಸ್ಲಿಂ ಮತಗಳ ಧ್ರುವೀಕರಣದ ನೆಪವೊಡ್ಡಿ ನಮ್ಮನ್ನು ದೂರವಿಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಸೋಲಿಸಲು ಜಂಟಿ ಹೋರಾಟದ ಕರೆ
ನಾವು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಇತರ ಜಾತ್ಯತೀತ ಪಕ್ಷಗಳಿಗೆ ಯಾಕೆ ಆತಂಕ ಎಂದು ಓವೈಸಿ ಪ್ರಶ್ನಿಸಿದ್ದಾರೆ. ಈ ಹಿಂದೆ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ನಾವು ಮಹಾಘಟಬಂಧನ್ ಮೈತ್ರಿಕೂಟದ ಎದುರು ಕೇವಲ ಆರು ಕ್ಷೇತ್ರಗಳನ್ನು ಮಾತ್ರ ಕೇಳಿದ್ದೆವು. ಆದರೆ ನಮ್ಮ ಪ್ರಸ್ತಾಪವನ್ನು ಅವರು ತಿರಸ್ಕರಿಸಿದರು. ಈಗ ಉತ್ತರ ಪ್ರದೇಶದಲ್ಲೂ ಅದೇ ಪರಿಸ್ಥಿತಿ ಮರುಕಳಿಸಬಾರದು. ಬಿಜೆಪಿಯನ್ನು ಸೋಲಿಸುವುದೇ ವಿರೋಧ ಪಕ್ಷಗಳ ಮುಖ್ಯ ಗುರಿಯಾಗಿದ್ದರೆ, ನಮ್ಮೊಂದಿಗೆ ಕೈಜೋಡಿಸಲಿ. ನಾವು ಸೀಟು ಹಂಚಿಕೆ ಸೇರಿದಂತೆ ಎಲ್ಲಾ ಪ್ರಮುಖ ನಿರ್ಧಾರಗಳ ಕುರಿತು ಚರ್ಚಿಸಲು ಮುಕ್ತ ಮನಸ್ಸನ್ನು ಹೊಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಬಿಹಾರ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನಮ್ಮ ಪಕ್ಷದ ವಿರುದ್ಧವೇ ಪ್ರಚಾರ ನಡೆಸಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಿಸಿದ್ದರು. ಆದಾಗ್ಯೂ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಉದ್ದೇಶದಿಂದ ನಾವು ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಸ್ವಯಂಘೋಷಿತ ಜಾತ್ಯತೀತ ನಾಯಕರೆಲ್ಲರೂ ಒಂದಾಗಿ ಹೋರಾಡಬೇಕಾದ ಸಮಯ ಬಂದಿದೆ ಎಂದು ಓವೈಸಿ ಕರೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಓವೈಸಿ, ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಸ್ಲಿಮರು ಉನ್ನತ ಶಿಕ್ಷಣ ಪಡೆಯುವುದನ್ನು ಸಹಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರಿಗೆ ಸೇರಿದ ಜೌಹರ್ ವಿಶ್ವವಿದ್ಯಾಲಯದ ಮೇಲಿನ ಬುಲ್ಡೋಜರ್ ಕಾರ್ಯಾಚರಣೆಯನ್ನು ಕಟುವಾಗಿ ಖಂಡಿಸಿದ ಅವರು, ಮುಸ್ಲಿಂ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ ಎಂದರು.
ಇದರೊಂದಿಗೆ, ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ಗುರಿಯಾಗಿಸಲು ಬಿಜೆಪಿ ಸರ್ಕಾರ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಹವಣಿಸುತ್ತಿದೆ. ಯಾವುದೇ ಗಂಭೀರ ಚರ್ಚೆಗಳಿಲ್ಲದೆ ಸಂಸತ್ತಿನಲ್ಲಿ ಅತ್ಯಂತ ಅವಸರದಲ್ಲೇ ಮಸೂದೆಗಳನ್ನು ಪಾಸ್ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಆಂತರಿಕ ಬಂಡಾಯದ ಕುರಿತು ಪ್ರತಿಕ್ರಿಯಿಸಿದ ಓವೈಸಿ, ಬಂಗಾಳದಲ್ಲಿ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಏಕೆ ಎಂದು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆ ನಾಯಕರೆಲ್ಲರೂ ಸುಳ್ಳುಗಾರರು ಮತ್ತು ಅವರು ಚುನಾವಣೆಯಲ್ಲಿ ಸೋಲಲಿದ್ದಾರೆ ಎಂದು ನಾನು ಮೊದಲೇ ಎಚ್ಚರಿಸಿದ್ದೆ. ಆದರೆ ಮಮತಾ ಬ್ಯಾನರ್ಜಿ ನನ್ನ ಮಾತನ್ನು ನಿರ್ಲಕ್ಷಿಸಿದ್ದರು ಎಂದು ಕುಟುಕಿದರು.
ಉತ್ತರ ಪ್ರದೇಶದ ಮುಂಬರುವ ಚುನಾವಣೆಗೆ ಅಸಾದುದ್ದೀನ್ ಓವೈಸಿ ನೀಡಿರುವ ಮೈತ್ರಿ ಪ್ರಸ್ತಾಪವು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದ್ದು, ಅಖಿಲೇಶ್ ಯಾದವ್ ಮತ್ತು ಮಾಯಾವತಿ ಈ ಪ್ರಸ್ತಾಪಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.








