ಬೆಂಗಳೂರು, ಸೆಪ್ಟೆಂಬರ್ 24: ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ (SL Bhyrappa) (94) ಅವರು ನಿಧನರಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಸ್. ಎಲ್ ಭೈರಪ್ಪ ಅವರು ವಯೋಸಹಜ ಕಾಯಿಲೆ ಬಳಲುತ್ತಿದ್ದರು.
ಹೀಗಾಗಿ ಅವರು 3 ತಿಂಗಳಿನಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದರು. 94 ವರ್ಷದ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರು ಒಬ್ಬ ಪ್ರಸಿದ್ಧ ಕನ್ನಡ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಲೇಖಕರಾಗಿದ್ದು, 2023ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು,
ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ಅವರನ್ನು 6 ತಿಂಗಳ ಹಿಂದೆ ಅನಾರೋಗ್ಯ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಅವರಿಗೆ ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್ ಇದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 1934 ಆಗಸ್ಟ್ 20ರಂದು ಲಿಂಗಣ್ಣಯ್ಯ-ಗೌರಮ್ಮ ದಂಪತಿಯ ಪುತ್ರರಾಗಿ ಜನಿಸಿದ ಅವರು, ಬಾಗೂರು, ನುಗ್ಗೇಹಳ್ಳಿ ಶಾಲೆಗಳಲ್ಲಿ ಪ್ರಾಥಮಿಕ, ಮೈಸೂರಿನ ಶಾರದಾವಿಲಾಸದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ 2 ಚಿನ್ನದ ಪದಕಗಳೊಂದಿಗೆ ಎಂ.ಎ ತತ್ವಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
ಬರೋಡದ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ‘ಸತ್ಯ ಮತ್ತು ಸೌಂದರ್ಯ’ ಪ್ರಬಂಧಕ್ಕೆ ಪಿ.ಎಚ್‌ಡಿ ಪದವಿ ಪಡೆದ ನಂತರ ಅವರು, ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜು, ಗುಜರಾತ್‌ನ ಸರ್ದಾರ್ ವಲ್ಲಭಬಾಯಿ ಪಟೇಲ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ (ಎನ್ ಸಿಇಆರ್‌ಟಿ) 1967-71ರವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಮೈಸೂರಿಗೆ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾದ ಅವರು, ತತ್ವಶಾಸ್ತ್ರ ಮತ್ತು ಶಿಕ್ಷಣ ವಿಜ್ಞಾನದ ಪ್ರಾಧ್ಯಾಪಕರಾಗಿ 1991ರಲ್ಲಿ ನಿವೃತ್ತರಾದರು.
ಅಂತ್ಯಕ್ರಿಯೆ
ಎಸ್ ಭೈರಪ್ಪ ಅವರ ಅಂತ್ಯಕ್ರಿಯೆ ಶುಕ್ರವಾರ ಅಂದರೆ ಸೆಪ್ಟೆ.ಬರ್ 26ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಲಿದೆ. ಭೈರಪ್ಪ ಅವರ ಪಾರ್ತೀವ ಶರೀರವನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸಲಾಗಿದ್ದು.
ಸಾರ್ವಜನಿಕ ದರ್ಶನ
ನಾಳೆ (ಸೆಪ್ಟೆಂಬರ್ 25) ಬೆಳಗ್ಗೆ 8ಗಂಟೆಗೆ ವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲ. ಎಂಟು ಗಂಟೆ ನಂತರ ಆಸ್ಪತ್ರೆಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಪಾರ್ತೀವ ಶರೀರವನ್ನು ಶಿಫ್ಟ್ ಮಾಡಿ ಸಾರ್ವಜನಿಕರ ಅಂತಿಮ ದರ್ಶನನ ವ್ಯವಸ್ಥೆ ಮಾಡಲಾಗುತ್ತದೆ.
ನಾಳೆ (ಸೆಪ್ಟೆಂಬರ್ 25) ಮಧ್ಯಾಹ್ನದ ನಂತರ ಎಸ್ ಎಲ್ ಭೈರಪ್ಪ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಸಂಜೆ ಮೈಸೂರಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಬಳಿಕ ಶುಕ್ರವಾರ ಮಧ್ಯಾಹ್ನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








